ಹೊಗೇನಕಲ್ ಯೋಜನೆ ಬಗ್ಗೆ ರಾಜ್ಯ ಸರ್ಕಾರ ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದು, ಅಧಿವೇಶನದ ನಂತರ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸರ್ವಪಕ್ಷ ನಿಯೋಗ ಕೊಂಡೊಯ್ದು ಕೇಂದ್ರ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ವಿಧಾನಪರಿಷತ್‌ನಲ್ಲಿ ಬುಧವಾರ ತಿಳಿಸಿದರು.
ಪ್ರಶ್ನೋತ್ತರ ಕಲಾಪದಲ್ಲಿ ಅಬ್ದುಲ್ ಅಜೀಂ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ತಮಿಳುನಾಡು ಕೈಗೊಂಡಿರುವ ಹೊಗೇನಕಲ್ ಯೋಜನೆ ಬಗ್ಗೆ ರಾಜ್ಯ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೇ ಪ್ರಸಕ್ತ ಅಧಿವೇಶನ ಮುಗಿದ ಕೂಡಲೇ ಸರ್ವಪಕ್ಷ ನಿಯೋಗದೊಂದಿಗೆ ಪ್ರಧಾನಿಗೆ ಆಕ್ಷೇಪಣೆ ಸಲ್ಲಿಸಲಾಗುವುದು. ಇದಕ್ಕೆ ಒಪ್ಪದಿದ್ದರೆ ಕಾನೂನು ಸಮರ ನಡೆಸಲಾಗುವುದು ಎಂದು ಸಚಿವರು ಈ ಸಂದರ್ಭದಲ್ಲಿ ಹೇಳಿದರು.
ಹೊಗೇನಕಲ್ ಯೋಜನೆಯಿಂದ ಉದ್ಭವವಾಗಿರುವ ಹಲವು ಅಂತಾರಾಜ್ಯ ವಿಷಯಗಳು ಇತ್ಯರ್ಥವಾಗುವುದಿಲ್ಲ. ಈ ಯೋಜನೆಯಿಂದ ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾದರೆ ಕಾನೂನು ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ ಎಂದು ವಿವರಿಸಿದರು. |