ಕರ್ನಾಟಕ ಗೃಹ ಮಂಡಳಿಯಲ್ಲಿ ನಡೆದಿರುವ ಸುಮಾರು 400 ಕೋಟಿ ರೂ. ಮೌಲ್ಯದ ಭೂ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕೆಂದು ಜೆಡಿಎಸ್ ಒತ್ತಾಯಿಸಿದೆ.
ಭೂ ಹಗರಣದ ತನಿಖೆಯನ್ನು ಸಿಬಿಐ ಅಥವಾ ಲೋಕಾಯುಕ್ತರಿಂದ ನಡೆಸಬೇಕು ಹಾಗೂ ವಸತಿ ಇಲಾಖೆಯ ಕಾರ್ಯದರ್ಶಿ ಮತ್ತು ಆಯುಕ್ತರನ್ನು ಕೂಡಲೇ ಸಸ್ಪಂಡ್ ಮಾಡಬೇಕೆಂದು ಜೆಡಿಎಸ್ ಆಗ್ರಹಿಸಿದೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ರೇವಣ್ಣ, ಪ್ರಕರಣದ ಕುರಿತು ಸದನದಲ್ಲಿ ಜೆಡಿಎಸ್ ನಡೆಸುತ್ತಿರುವ ಧರಣಿಯಿಂದ ಉಂಟಾಗಿರುವ ಬಿಕ್ಕಟ್ಟನ್ನು ನಿವಾರಿಸಲು ಸಭಾಧ್ಯಕ್ಷ ಜಗದೀಶ್ ಶೆಟ್ಟರ್ ಅವರು ಕರೆದಿದ್ದ ಸಂಧಾನ ಸಭೆಯಲ್ಲಿ ಪಾಲ್ಗೊಂಡ ಬಳಿಕ ಸರ್ಕಾರದ ಮುಂದೆ ನಮ್ಮ ಬೇಡಿಕೆಗಳನ್ನು ನೀಡಿದ್ದೇವೆ. ಸರ್ಕಾರದ ಕ್ರಮ ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಬಳಿ ನಿವೇಶನಗಳನ್ನು ನಿರ್ಮಾಣಕ್ಕಾಗಿ ನಡೆದಿರುವ ಭೂ ಖರೀದಿಯಲ್ಲಿ ಅವ್ಯವಹಾರ ನಡೆದಿರುವ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಇದರಿಂದ ಕೃಷ್ಣಯ್ಯ ಶೆಟ್ಟಿ ಅವರ ಕೈವಾಡವಿರುವುದು ಸ್ಪಷ್ಟವಾಗುತ್ತದೆ ಎಂದು ರೇವಣ್ಣ ಆರೋಪಿಸಿದರು. |