ರಾಜ್ಯ ಸರ್ಕಾರ 'ಲ್ಯಾಂಡ್ ಮಾಫಿಯಾ'ಗೆ ಬಗ್ಗುವ ಪ್ರಶ್ನೆಯೇ ಇಲ್ಲ ಸರ್ಕಾರಿ ಜಮೀನನ್ನು ರಕ್ಷಿಸುವಲ್ಲಿ ಹಿಂಜರಿಯುವುದಿಲ್ಲ ಎಂದು ಕಂದಾಯ ಸಚಿವ ಜಿ.ಕರುಣಾಕರ ರೆಡ್ಡಿ ಬುಧವಾರ ವಿಧಾನಪರಿಷತ್‌ನಲ್ಲಿ ಮಾತನಾಡುತ್ತ ತಿಳಿಸಿದರು.ಬೆಂಗಳೂರು ನಗರ ಜಿಲ್ಲೆಯಲ್ಲಿ ಈಗಾಗಲೇ 33,878 ಎಕರೆ ಸರ್ಕಾರಿ ಜಮೀನು ಒತ್ತುವರಿಯಾಗಿರುವುದನ್ನು ಪತ್ತೆ ಹಚ್ಚಲಾಗಿದ್ದು, ಈ ಪೈಕಿ 9,033 ಜಮೀನನ್ನು ಒತ್ತುವರಿಯಿಂದ ತೆರವುಗೊಳಿಸಲಾಗಿದೆ ಎಂದು ವಿವರಿಸಿದರು.ತೆರವುಗೊಳಿಸಿದ ಜಮೀನನ್ನು ಪುನಃ ಭೂಗಳ್ಳರು ವಶಪಡಿಸಿಕೊಳ್ಳುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ವಶಪಡಿಸಿಕೊಂಡ ಜಮೀನನ್ನು ಭೂಗಳ್ಳರು ಮತ್ತೆ ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಕಾಂಗ್ರೆಸ್‌ನ ಎಂ.ಶ್ರೀನಿವಾಸ್, ಜೆಡಿಎಸ್‌ನ ಎಂ.ಸಿ.ನಾಣಯ್ಯ ಅವರ ಆತಂಕಕ್ಕೆ ಸಚಿವ ರೆಡ್ಡಿ ಸಮಜಾಯಿಷಿ ನೀಡಿದರು.ಸರ್ಕಾರಿ ಜಮೀನು ಒತ್ತುವರಿ ಸಂಬಂಧ ತನಿಖೆಗೆ ಶಾಸಕ ಎ.ಟಿ.ರಾಮಸ್ವಾಮಿ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ವಿಧಾನಮಂಡಲದ ಜಂಟಿ ಸದನ ಸಮಿತಿ ಮಧ್ಯಂತರ ವರದಿಯಂತೆಯೇ ಒತ್ತುವರಿ ಭೂಮಿಯನ್ನು ವಶಪಡಿಸಿಕೊಳ್ಳುವ ಕ್ರಮವನ್ನು ಚುರುಕುಗೊಳಿಸಲಾಗಿದೆ ಎಂದು ತಿಳಿಸಿದರು. |