ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಶಾಸಕ ಕೃಷ್ಣಭೈರೇಗೌಡ ಅವರ ನಿವಾಸಕ್ಕೆ ಮಂಗಳವಾರ ರಾತ್ರಿ ಬಿಜೆಪಿ ಪಕ್ಷದ ಕೆಲವು ಕಾರ್ಯಕರ್ತರು ನುಗ್ಗಿ ಪತ್ನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆಯನ್ನು ಖಂಡಿಸಿ ಬುಧವಾರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಳ್ಳಾರಿ ರಸ್ತೆಯಲ್ಲಿ ಪ್ರತಿಭಟನೆ ಹಾಗೂ ರಸ್ತೆ ತಡೆ ನಡೆಸಿದರು.ಕೊಡಿಗೆಹಳ್ಳಿ ಗೇಟ್ ಜಂಕ್ಷನ್ ಬಳಿ ಗುಂಪು ಸೇರಿದ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಕೃಷ್ಣಭೈರೇಗೌಡ ಅವರ ನೇತೃತ್ವದಲ್ಲಿ ಪ್ರತಿಭಟನೆ, ರಸ್ತೆ ತಡೆ ನಡೆಸಿ, ಬಿಜೆಪಿ ಕಾರ್ಯಕರ್ತರ ಪುಂಡಾಟಿಕೆ ಖಂಡಿಸಿದ ನಂತರ ಕೊಡಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರು.ಘಟನೆ ವಿವರ: ಬಳ್ಳಾರಿ ರಸ್ತೆ ಸಹಕಾರ ನಗರದಲ್ಲಿ ಕೃಷ್ಣಭೈರೇಗೌಡ ಮನೆಗೆ ನಿನ್ನೆ ರಾತ್ರಿ ಸುಮಾರು 8-10ಮಂದಿ ಮದ್ಯಪಾನ ಮಾಡಿ ಗೌಡರ ಪತ್ನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಆ ವೇಳೆಯಲ್ಲಿ ಕೃಷ್ಣಭೈರೇಗೌಡ ಮನೆಯಲ್ಲಿ ಇರಲಿಲ್ಲವಾಗಿತ್ತು. ತಡವಾಗಿ ಅವರು ಮನೆಗೆ ಬಂದಾಗ ತಮಗೂ ಹಾಗೂ ಪತ್ನಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಒಡ್ಡಿ ಹೋಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಆದರೆ ಗಲಾಟೆ ಮಾಡಿದವರು ಭಿನ್ನಮತೀಯ ಕಾಂಗ್ರೆಸ್ಸಿಗರು ಎಂಬುದು ಸ್ಥಳೀಯರ ಆರೋಪ. |