ರಾಜ್ಯದ ಕೊಡಗು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಬುಧವಾರವೂ ಕುಂಭದ್ರೋಣ ಮಳೆಯ ರೌದ್ರಾವತಾರ ಮುಂದುವರಿದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಡಿಕೇರಿಯಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು, ಹಲವಾರು ಮನೆಗಳು ಕುಸಿತಗೊಂಡಿದೆ.
ವರುಣನ ರೌದ್ರಾವತಾರದಿಂದಾಗಿ ರಸ್ತೆ ಸಂಚಾರ ಕಡಿದು ಹೋಗಿದೆ. ಕೆಲ ಜಿಲ್ಲೆಗಳ ಗ್ರಾಮಗಳು ಜಲಾವೃತವಾಗಿ ದ್ವೀಪಗಳಾಗಿ ಹೋಗಿವೆ. ಯುಗಚಿ ಜಲಾಶಯ ಭರ್ತಿಯಾಗಿದ್ದು, ಹಾರಂಗಿ ಜಲಾಶಯವೂ ಭರ್ತಿ ಆಗುತ್ತ ಸಾಗಿದೆ. ಭಾಗಮಂಡಲದಲ್ಲಿ ಅತೀ ಹೆಚ್ಚು ಅಂದರೆ ಸುಮಾರು 30 ಸೆಂಮೀ ಮಳೆ ಆಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಡಿಕೇರಿಯ ಭಾಗಮಂಡಲ ದ್ವೀಪವಾಗಿದ್ದು, ರಸ್ತೆ ಸಂಚಾರ ಸಂಪೂರ್ಣ ಕಡಿದು ಹೋಗಿದೆ. ತಲಕಾವೇರಿ-ಭಾಗಮಂಡಲ ವ್ಯಾಪ್ತಿಯಲ್ಲಿಯೂ ಮಳೆಯ ರೌದ್ರಾವತಾರ ಜೋರಾಗಿದ್ದು, ತ್ರಿವೇಣಿ ಸಂಗಮ ಮತ್ತೆ ಜಲಾವೃತವಾಗಿದೆ. ಭಾಗಮಂಡಲ-ಮಡಿಕೇರಿ ರಸ್ತೆಯ ಚಿಕ್ಕ ಕೊಳ್ಳದಂತಾಗಿದ್ದು, ರಸ್ತೆಯಲ್ಲಿ ನಾಲ್ಕೈದು ಅಡಿ ನೀರು ನಿಂತಿದೆ. ಮಡಿಕೇರಿ-ಮೆಟ್ಟಳ್ಲಿ ಮತ್ತು ಮಡಿಕೇರಿ-ಮೂರ್ನಾಡು ನಡುವಿನ ರಸ್ತೆಯಲ್ಲಿ ಭೂಕುಸಿತ ಉಂಟಾಗಿದೆ. ಮಡಿಕೇರಿಯ ಮರಗೋಡು ಗ್ರಾಮದ ಕಾಫಿತೋಟದಲ್ಲಿ ಮರ ಉರುಳಿದ್ದರಿಂದ ಕಾರ್ಮಿಕ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿಯನ್ನು ಮಹೇಶ್ ಎಂದು ಗುರುತಿಸಲಾಗಿದೆ.
ಕೊಡಗಿನ ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಗಾಳಿಯೂ ಕೂಡಾ ಹುಚ್ಚೆದ್ದು ಬೀಸತೊಡಗಿದೆ. ಅಪಾಯ ಪ್ರದೇಶದಲ್ಲಿರುವ ಜನರನ್ನು ಸ್ಥಳಾಂತರಿಸಲು ಜಿಲ್ಲಾಡಳಿತ ಅಗತ್ಯ ಕ್ರಮಕೈಗೊಂಡಿರುವ ವರದಿಯಾಗಿದೆ. ಕೆಲವಡೆ ಭೂಕುಸಿತ ಉಂಟಾಗಿದೆ. ಮಲೆನಾಡಿನ ಸೆರಗು ಜಿಲ್ಲೆ ಹಾವೇರಿ ಜಿಲ್ಲೆಯಲ್ಲಿ ಕೂಡಾ ಮಳೆ ತೀವ್ರತೆ ಹೆಚ್ಚಿದ್ದು, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಭಾಗಮಂಡಲ-30, ಕೊಟ್ಟಿಗೆಹಾರ, ಕಮ್ಮರಡಿ-25, ಹಂಚದಕಟ್ಟೆ-23, ಕೊಲ್ಲೂರು-22, ಪೊನ್ನಂಪೇಟೆ-21, ಸಿದ್ದಾಪುರ-20, ಭಟ್ಕಳ-18, ಖಾನಾಪುರ, ಹೊಸನಗರ, ತೀರ್ಥಹಳ್ಳಿ-17, ಲಿಂಗನಮಕ್ಕಿ, ಜಯಪುರ-16, ಜಗಲ್ ಪೇಟೆ-15, ಸಿದ್ದಾಪುರ-14, ಧರ್ಮಸ್ಥಳ, ಯಲ್ಲಾಪುರ, ಮೂಡಿಗೆರೆ, ಮಡಿಕೇರಿ, ಎನ್ ಆರ್ ಪುರ-13 ಸೆಂ ಮೀನಷ್ಟು ಭಾರಿ ಮಳೆ ಬಿದ್ದಿದೆ. |