ವಾಹನದ ಮೇಲೆ ಕೆಂಪು ದೀಪವನ್ನು ಬೇಕಾಬಿಟ್ಟಿ ಅಳವಡಿಸಿ ತಿರುಗಾಡುತ್ತಿರುವ ವಿಷಯ ಪರಿಷತ್ ಕಲಾಪದಲ್ಲಿ ಪ್ರತಿಧ್ವನಿಸಿರುವ ಹಿನ್ನೆಲೆಯಲ್ಲಿ, ವಾಹನಗಳ ಮೇಲೆ ಕೆಂಪುದೀಪ ಅಳವಡಿಸುವ ನಿಯಮಕ್ಕೆ ತಿದ್ದುಪಡಿ ತರಲಾಗುವುದು ಎಂದು ಗೃಹ ಸಚಿವ ವಿ.ಎಸ್.ಆಚಾರ್ಯ ತಿಳಿಸಿದ್ದಾರೆ.
1994ರ ಆದೇಶದ ಪ್ರಕಾರ 32ಕೆಟಗೆರಿಯ ವ್ಯಕ್ತಿಗಳು ಮತ್ತು ಅಧಿಕಾರಿಗಳ ವಾಹನಕ್ಕೆ ಮಾತ್ರ ಕೆಂಪುದೀಪ ಅಳವಡಿಸಬೇಕು ಎಂಬುದು ನಿಯಮ. ಅವುಗಳನ್ನೆಲ್ಲಾ ಪರಿಶೀಲಿಸಿ ಇದಕ್ಕೆ ತಿದ್ದುಪಡಿ ತರಲಾಗುವುದು ಎಂದು ಪರಿಷತ್‌ನಲ್ಲಿ ಜೆಡಿಎಸ್ ನಾಯಕ ಎಂ.ಸಿ.ನಾಣಯ್ಯ ಅವರು ಕೆಂಪು ದೀಪದ ದುರುಪಯೋಗ ಕುರಿತು ಪ್ರಸ್ತಾಪಿಸಿದಾಗ ಆಚಾರ್ಯ ಉತ್ತರಿಸಿದರು.
ಲೋಕಸಭಾ ಸದಸ್ಯರು ಕೆಂಪುಗೂಟದ ಬಳಸುತ್ತಿದ್ದಾರೆ. ನಿಗಮ ಮಂಡಳಿ ಅಧ್ಯಕ್ಷರು, ಸಂಪುಟ ದರ್ಜೆಯ ನಿಮ್ಮ ಸಲಹೆಗಾರರೂ ಕೆಂಪುಗೂಟದ ಕಾರಲ್ಲೇ ಓಡಾಡುತ್ತಿದ್ದಾರೆ. ಇನ್ನು ಮುಂದೆ ಶಾಸಕರೂ ಹಾಕಿಕೊಂಡು ಓಡಾಡುತ್ತೇವೆ. ಲೋಕಸಭಾ ಸದಸ್ಯರಿಗೆ ರಾಜ್ಯ ಸರ್ಕಾರ ಕಾರು ನೀಡಿರುವುದು ನಿಯಮಬಾಹಿರ ಎಂದು ನಾಣಯ್ಯ ಸರ್ಕಾರದ ಕ್ರಮದ ವಿರುದ್ಧ ಹರಿಹಾಯ್ದರು. |