ಸಭಾಧ್ಯಕ್ಷರು ಕರೆದ ಸಂಧಾನ ಸಭೆಗಳಿಗೆ ಮುಖ್ಯಮಂತ್ರಿ ತಪ್ಪಿಸಿಕೊಳ್ಳುವ ಮೂಲಕ ಬೇಜವಾಬ್ದಾರಿಯಿಂದ ನಡೆದುಕೊಂಡು ಸದನಕ್ಕೆ ಅಗೌರವ ತೋರಿಸಿರುವುದನ್ನು ಗಮನಿಸಿದರೆ ಗೃಹ ಮಂಡಳಿ ಪ್ರಕರಣದಲ್ಲಿ ಭ್ರಷ್ಟರ ರಕ್ಷಣೆಗೆ ಸಾಥ್ ನೀಡಿರುವುದು ಸ್ಪಷ್ಟವಾಗುತ್ತದೆ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಪಿಗಳನ್ನು ರಕ್ಷಣೆ ಮಾಡುವುದು ದೊಡ್ಡ ಅಪರಾಧ. ಮುಖ್ಯಮಂತ್ರಿಗಳ ನಡವಳಿಕೆಯನ್ನು ನೋಡಿದರೆ ತಪ್ಪಿತಸ್ಥರನ್ನು ರಕ್ಷಣೆಯ ಮಾಡಲು ನೇರವಾಗಿಯೇ ಕ್ರಮ ಕೈಗೊಳ್ಳುತ್ತಿದ್ದಾರೆ. ಇದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗೃಹ ಮಂಡಳಿಯಲ್ಲಿ ಜಮೀನು ಖರೀದಿ ಪ್ರಕರಣ ಕೇವಲ ಶಿಢ್ಲಘಟ್ಟದಲ್ಲಿ ಮಾತ್ರ ನಡೆದಿಲ್ಲ. ಮೈಸೂರು, ಕೋಲಾರ, ಯಾದಗಿರಿ, ಬಿಜಾಪುರ ಹೀಗೆ ವಿವಿಧ ಜಿಲ್ಲೆಗಳಲ್ಲಿ ನಡೆದಿದೆ. ಸರ್ಕಾರದ ಅನುಮತಿ ಇಲ್ಲದೆ ಈ ಪ್ರಕರಣ ನಡೆಯಲು ಸಾಧ್ಯವಿಲ್ಲ ಎಂದು ದೂರಿದರು.
ವಸತಿ ಇಲಾಖೆಯ ಅಂದಿನ ಕಾರ್ಯದರ್ಶಿ ಹಾಗೂ ಗೃಹ ಮಂಡಳಿ ಆಯುಕ್ತರನ್ನು ಕೂಡಲೇ ಅಮಾನತುಗೊಳಿಸಬೇಕು. ಆ ಮೂಲಕ ಸ್ವೇಚ್ಛಾಚಾರಕ್ಕೆ ಅವಕಾಶವಿಲ್ಲ ಎಂಬ ಸಂದೇಶ ಹೋಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. |