ಕೊಡಗು, ದಕ್ಷಿಣ ಕನ್ನಡ ಉಡುಪಿ ಸೇರಿದಂತೆ ರಾಜ್ಯಾದ್ಯಂತ ಕುಂಭದ್ರೋಣ ಮಳೆಯ ರೌದ್ರಾವತಾರದಿಂದ ಜನಜೀವನ ಅಸ್ತವ್ಯಸ್ಥಗೊಂಡಿದ್ದು, ವಿವಿಧೆಡೆ ಐದು ಮಂದಿ ಸಾವನ್ನಪ್ಪಿದ್ದಾರೆ.
ಕೊಡಗಿನ ಮಡಿಕೇರಿಯಲ್ಲಿ ಸಾವಿರಾರು ಎಕರೆ ಕೃಷಿ ಭೂಮಿ ಜಲಾವೃತವಾಗಿದ್ದು, ಭಾಗಮಂಡಲದಲ್ಲಿ ಕಾವೇರಿ ತುಂಬಿ ಹರಿಯುತ್ತಿದೆ. ಇಲ್ಲಿನ ಬೇತ್ರಿ ಸೇತುವೆ ಮುಳುಗಡೆ ಯಿಂದಾಗಿ ಸಂಚಾರ ವ್ಯವಸ್ಥೆ ಸ್ಥಗಿತಗೊಂಡಿದೆ. ಮೈಸೂರಿನಲ್ಲಿ ಮಹಿಳೆ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದು, ಮೂರು ಮಂದಿ ಗಾಯಗೊಂಡಿದ್ದಾರೆ. ಅಲ್ಲದೇ ಧಾರವಾಡ ಜಿಲ್ಲೆಯಲ್ಲಿ ವರುಣನ ಆರ್ಭಟಕ್ಕೆ ಮನೆ ಕುಸಿದು ಬಿದ್ದು ಅಪ್ಪ ಹಾಗೂ ಇಬ್ಬರು ಮಕ್ಕಳು ಬಲಿಯಾಗಿದ್ದಾರೆ.
ಮೈಸೂರಿನ ಪಿರಿಯಾಪಟ್ಟಣದ ರಾಣೆಗೇಟ್ ಗ್ರಾಮದ ಗಂಗಪ್ಪ(45ವ) ಅವರು ಮನೆ ಕುಸಿತದಿಂದ ಸಾವನ್ನಪ್ಪಿದ್ದಾರೆ. ವರುಣ ಗ್ರಾಮದ ಮಹದೇವ ಕಾಲೋನಿಯಲ್ಲಿ ಮನೆ ಕುಸಿತದಿಂದ ಕಮಲಮ್ಮ(65ವ) ಬಲಿಯಾಗಿದ್ದು, ಮೂವರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿವಮೊಗ್ಗದಲ್ಲಿಯೂ ಹಲವಾರು ಮನೆಗಳು ಕುಸಿದು ಬಿದ್ದಿದ್ದು, ಹಲವಾರು ಮನೆಗಳಿಗೆ ನೀರು ನುಗ್ಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮನೆ ತೊರೆಯುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಮಂಗಳೂರಿನ ಕದ್ರಿ ಸಮೀಪ ಮರಗಳು ಧರೆಗುರುಳಿ ಜನಜೀವನ ಅಸ್ತವ್ಯಸ್ತಗೊಂಡಿದೆ. |