ಸಭಾಪತಿ ಪೀಠದಲ್ಲಿದ್ದ ಉಪಸಭಾಪತಿ ಪುಟ್ಟಣ್ಣ ಅವರನ್ನು ಕುರಿತು ಆಡಳಿತಾರೂಢ ಬಿಜೆಪಿಯ ಸದಸ್ಯರೊಬ್ಬರ ಹೇಳಿಕೆ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ವತಃ ವಿಷಾದ ವ್ಯಕ್ತಪಡಿಸಿದ ಅಪರೂಪದ ಘಟನೆ ಬುಧವಾರ ವಿಧಾನಪರಿಷತ್ ಕಲಾಪದಲ್ಲಿ ನಡೆಯಿತು.
ನಿನ್ನೆಯ ಕಲಾಪದ ಸಂದರ್ಭದಲ್ಲಿ ಸಭಾಧ್ಯಕ್ಷ ಪುಟ್ಟಣ್ಣ ಅವರು ಸರದಿ ಪ್ರಕಾರ ಪ್ರಶ್ನೆ ಕೇಳಲು ಮುಖ್ಯಮಂತ್ರಿ ಚಂದ್ರು ಅವರಿಗೆ ಆಹ್ವಾನ ನೀಡುತ್ತಿದ್ದಂತೆಯೇ ಎದ್ದುನಿಂತ ಅವರು, 'ಸಭಾಪತಿ ಪೀಠದಲ್ಲಿರುವವರಿಂದ ನನಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಇಲ್ಲ' ಎಂದು ಆವೇಶದಿಂದ ಮಾತನಾಡಿದರು. ಅಲ್ಲದೇ ಸಭಾಪತಿಗಳಿಗೆ ಅಗೌರವವನ್ನುಂಟು ಮಾಡುವ ರೀತಿಯಲ್ಲಿ ಕೆಲವು ಆಕ್ಷೇಪಾರ್ಹ ಪದಗಳನ್ನು ಬಳಸಿದರು.
ಆಗ ಸಿಟ್ಟಿಗೆದ್ದ ಜೆಡಿಎಸ್‌ನ ಬಸವರಾಜ ಹೊರಟ್ಟಿ, ಕೆ.ಟಿ.ಶ್ರೀಕಂಠೇಗೌಡ, ವಿರೋಧ ಪಕ್ಷದ ನಾಯಕ ವಿ.ಎಸ್.ಉಗ್ರಪ್ಪ, ಜೆಡಿಯುನ ಡಾ.ಎಂ.ಪಿ.ನಾಡಗೌಡ ಮೊದಲಾದವರು, ಈ ರೀತಿ ಮಾತನಾಡುವುದು ಸರಿಯಲ್ಲ, ಪೀಠಕ್ಕೆ ಅವಮಾನ ಆಗುವ ರೀತಿ ಯಾರೂ ಮಾತನಾಡಬಾರದು, ಅವರು ಬೇಡ ಎಂದರೆ ಅವಿಶ್ವಾಸ ನಿರ್ಣಯ ತನ್ನಿ, ಆದರೆ ವೈಯಕ್ತಿಕವಾಗಿ ಟೀಕೆ ಮಾಡುವುದ ಸರಿಯಲ್ಲ ಎಂದರು.
ಆಗ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಈ ಸದನಕ್ಕೆ ದೊಡ್ಡ ಹಿನ್ನೆಲೆ ಇದೆ. ತಪ್ಪುಗ್ರಹಿಕೆಯಿಂದ, ಆವೇಶದಲ್ಲಿ ಚಂದ್ರು ಅವರು ಮಾತನಾಡಿರಬಹುದು. ಸಭಾಪತಿ ಸ್ಥಾನಕ್ಕೆ ಗೌರವ ಕೊಡುವುದು ನಮ್ಮ ಕರ್ತವ್ಯ ಎಂದ ನಂತರ ಪ್ರಕರಣ ಅಂತ್ಯ ಕಂಡಿತ್ತು. |