ರಾಜ್ಯಾದ್ಯಂತ ಮಳೆ ಸುರಿಯುತ್ತಿದ್ದು, ಈ ನಡುವೆ ಸಕಲೇಶಪುರ ತಾಲೂಕಿನ ಎಡಕುಮಾರಿ ಬಳಿ ಭೂಕುಸಿತದಿಂದಾಗಿ ಗೂಡ್ಸ್ ರೈಲೊಂದು ಮಧ್ಯದಲ್ಲಿಯೇ ಸಂಚಾರವನ್ನು ರದ್ದುಗೊಳಿಸಿ ನಿಂತಿದೆ.
ಮಂಗಳೂರಿನಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಗೂಡ್ಸ್ ರೈಲೊಂದು ಭೂಕುಸಿತದಿಂದ ಹಳಿಯ ಮಧ್ಯದಲ್ಲಿಯೇ ನಿಂತಿದ್ದು ಇದರಿಂದ ಮಂಗಳೂರು-ಬೆಂಗಳೂರು ರಾತ್ರಿ ವೇಳೆ ಸಂಚರಿಸುವ ರೈಲು ಸಂಚಾರ ರದ್ದುಗೊಳಿಸಲಾಗಿದೆ. ರೈಲು ಸಂಚಾರ ಸ್ಥಗಿತಗೊಂಡ ಪರಿಣಾಮ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಸಕಲೇಶಪುರದಿಂದ ಮಂಗಳೂರಿಗೆ ಹೆಚ್ಚುವರಿ ಬಸ್‌ಗಳನ್ನು ಬಿಡಲಾಗಿದೆ.
ರೈಲು ಹಳಿಯ ಮೇಲೆ ಬಿದ್ದಿರುವ ಮಣ್ಣನ್ನು ತೆರವುಗೊಳಿಸಿದ ನಂತರ ಎಂದಿನಂತೆ ರೈಲು ಸಂಚಾರ ಆರಂಭವಾಗಲಿದೆ. ಆ ನಿಟ್ಟಿನಲ್ಲಿ ಗುರುವಾರ ಮತ್ತು ಶುಕ್ರವಾರದ ರೈಲನ್ನು ರದ್ದುಗೊಳಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
ಸಕಲೇಶಪುರ ತಾಲೂಕಿನಾದ್ಯಂತ ಹೆಚ್ಚು ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಶಾಲಾ-ಕಾಲೇಜುಗಳಿಗೆ ಇಂದು ಸಹ ರಜೆ ಘೋಷಿಸಲಾಗಿದೆ.
ಗ್ರಾಮಾಂತರ ಪ್ರದೇಶ ಹಾಗೂ ಪಟ್ಟಣ ಪ್ರದೇಶದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹೆಚ್ಚಿನ ಮಳೆ ಬೀಳುತ್ತಿರುವ ಕಾರಣ ಹೇಮಾವತಿ ನದಿ ತುಂಬಿ ಹರಿಯುತ್ತಿದೆ. ಬೇಲೂರು, ಹಾಲೂರು ಹಾಗೂ ಹಾಸನದಲ್ಲಿ ಸಹ ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. |