ರಾಜ್ಯದಲ್ಲಿ ನಕ್ಸಲೀಯ ಚಟುವಟಿಕೆಗಳನ್ನು ನಿಗ್ರಹಗೊಳಿಸಲಾಗಿದ್ದು, ಮಾವೋವಾದಿ ಸಂಘಟನೆಯನ್ನು ನಿಷೇಧಿಸಲಾಗಿದೆ ಎಂದು ಗೃಹ ಸಚಿವ ವಿ.ಎಸ್.ಆಚಾರ್ಯ ಅವರು ವಿಧಾನಪರಿಷತ್‌ನಲ್ಲಿ ಗುರುವಾರ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ಪ್ರಕಾಶ್ ರಾಥೋಡ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ನಕ್ಸಲ್ ಪೀಡಿತ ಪ್ರದೇಶದಲ್ಲಿ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.
ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ರಾಯಚೂರು ಸೇರಿದಂತೆ ಇತರ ನಕ್ಸಲ್ ಪೀಡಿದ ಪ್ರದೇಶಗಳಲ್ಲಿ ಅಭಿವೃದ್ಧಿ ಹಾಗೂ ನಾಗರಿಕ ಸೌಲಭ್ಯಗಳ ಸಂಬಂಧ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.
ಅರಣ್ಯ ಹಕ್ಕು ಕಾಯ್ದೆಯನ್ನು ಬಳಸಿಕೊಂಡು ನಕ್ಸಲ್ ಪೀಡಿತ ಕುಗ್ರಾಮಗಳಿಗೆ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು. ನಕ್ಸಲೀಯರಿಗೆ ಬಾಹ್ಯವಾಗಿ ಸಹಾಯ ಮಾಡುತ್ತಿದ್ದವರ ಮಾಹಿತಿ ಸಂಗ್ರಹಿಸಿ ಅವರುಗಳ ಮೇಲೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಆಚಾರ್ಯ ವಿವರಿಸಿದರು. |