ಜುಲೈ 22ರಂದು ಬಾನಂಗಳದಲ್ಲಿ ನಡೆಯಲಿರುವ ಭಾಗಶಃ ಸೂರ್ಯಗ್ರಹಣವನ್ನು ಬೆಂಗಳೂರಿಗರೂ ವೀಕ್ಷಿಸಬಹುದಾಗಿದೆ. ಆದರೆ ಅದು ಸೂರ್ಯೋದಯಕ್ಕೂ ಮುನ್ನ ಬೆಳಿಗಿನ ಜಾವ 5ಗಂಟೆ 38ನಿಮಿಷಕ್ಕೆ ಎಂದು ಜವಾಹರಲಾಲ್ ನೆಹರು ತಾರಾಲಯದ ನಿರ್ದೇಶಕ ಎಸ್.ಶುಕ್ರೆ ತಿಳಿಸಿದ್ದಾರೆ.ಈ ಬಾರಿ ಮೂರು ಗ್ರಹಣಗಳು ಒಂದೇ ದಿನ ಗೋಚರವಾಗಲಿದ್ದು ಇದೊಂದು ಕೌತುಕದ ಕ್ಷಣವಾಗಿದೆ. ಇದರಲ್ಲಿ ಹೆಚ್ಚಿನ ವಿಶೇಷವೇನಿಲ್ಲ. ಕೆಲ ವರ್ಷಗಳಿಗೊಮ್ಮೆ ಎರಡು ಚಂದ್ರಗ್ರಹಣಗಳ ಮಧ್ಯೆ ಒಂದು ಸೂರ್ಯಗ್ರಹಣ ಅಥವಾ ಎರಡು ಸೂರ್ಯಗ್ರಹಣಗಳ ಮಧ್ಯೆ ಒಂದು ಚಂದ್ರಗ್ರಹಣ ಗೋಚರಿಸುವುದು ಸಹಜ ಪ್ರಕ್ರಿಯೆ ಎಂದು ವಿವರಿಸಿದರು.ಬೆಂಗಳೂರಿನಲ್ಲಿ ಭಾಗಶಃ ಸೂರ್ಯಗ್ರಹಣ ಗೋಚರಿಸಲಿದೆ. ಸೂರತ್, ಇಂದೋರ್, ಭೋಪಾಲ್, ವಾರಣಾಸಿ ಮತ್ತು ಅರುಣಾಚಲ ಪ್ರದೇಶದಿಂದ ಪೂರ್ಣ ಸೂರ್ಯಗ್ರಹಣ ವೀಕ್ಷಿಸಬಹುದಾಗಿದೆ. ಬೆಂಗಳೂರಿಗರು ಸೂರ್ಯಗ್ರಹಣ ವೀಕ್ಷಣೆಗಾಗಿ ನಂದಿಬೆಟ್ಟ ಅಥವಾ ಬಹುಮಹಡಿ ಕಟ್ಟಡಗಳ ಮೇಲಿಂದ ವೀಕ್ಷಿಸಬಹುದಾಗಿದೆ. ಹಾಗಂತ ಮೂಢನಂಬಿಕೆಯಿಂದ ಸೂರ್ಯಗ್ರಹಣವನ್ನು ವೀಕ್ಷಿಸದಿರುವುದು ಮೂರ್ಖತನ. ಆದರೆ ಗ್ರಹಣವನ್ನು ಬರಿಗಣ್ಣಿನಿಂದ ಮಾತ್ರ ವೀಕ್ಷಿಸಬೇಡಿ. ಸಣ್ಣ ರಂಧ್ರದ ಮೂಲಕ ಗೋಡೆಯ ಮೇಲೆ ಬಿಂಬ ಮೂಡಿಸಿ ನೋಡುವುದು, ನೀರಿನಲ್ಲಿ ಪ್ರತಿಬಿಂಬ ಮೂಡಿಸಿ ನೋಡುವುದು ಉತ್ತಮ ಎಂದು ಶುಕ್ರೆ ತಿಳಿಸಿದರು. |