ಕರ್ನಾಟಕ ಗೃಹ ನಿರ್ಮಾಣ ಮಂಡಳಿಯಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸಿಬಿಐ ಅಥವಾ ಲೋಕಾಯುಕ್ತ ತನಿಖೆ ನಡೆಸಬೇಕೆಂಬ ಪ್ರತಿಪಕ್ಷಗಳ ಆಗ್ರಹ ಕಳೆದ ಎರಡು ದಿನಗಳಿಂದ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ್ದು, ಗುರುವಾರವೂ ಕೂಡ ಕಲಾಪ ಗದ್ದಲದಲ್ಲಿಯೇ ಅಂತ್ಯ ಕಂಡಿದೆ.
ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರ ಅಧಿಕಾರ ಅವಧಿಯಲ್ಲಿ ನಡೆದಿದೆ ಎನ್ನಲಾದ ಭೂ ಹಗರಣದ ಬಗ್ಗೆ ಸಿಬಿಐ ಅಥವಾ ಲೋಕಾಯುಕ್ತರಿಂದ ತನಿಖೆ ನಡೆಸುವಂತೆ ಪ್ರತಿಪಕ್ಷಗಳ ಸದಸ್ಯರು ಇಂದೂ ಕೂಡ ವಿಧಾನಸಭೆಯಲ್ಲಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಪರಿಣಾಮ ಕಲಾಪವನ್ನು ಮಧ್ನಾಹ್ನ 3ಗಂಟೆಗೆ ಮುಂದೂಡುವಂತಾಯಿತು.
ಇಂದು ಬೆಳಿಗ್ಗೆ 11ಗಂಟೆಗೆ ಸದನ ಆರಂಭವಾಗಬೇಕಿತ್ತು. ಪ್ರತಿಪಕ್ಷಗಳ ಸದಸ್ಯರು ಧರಣಿ ಮುಂದುವರಿಸುವ ಸುಳಿವು ಅರಿತ ವಿಧಾನಸಭಾಧ್ಯಕ್ಷ ಜಗದೀಶ್ ಶೆಟ್ಟರ್ ಸದನ ಪ್ರಾರಂಭಿಸುವ ಗೋಜಿಗೆ ಹೋಗದೆ ಸಂಧಾನ ಸಭೆ ಕರೆದರು. ಆದರೆ ಸಂಧಾನ ಸಭೆ ವಿಫಲವಾಯಿತು. ಮಧ್ನಾಹ್ನದ ನಂತರ ಆರಂಭದ ಕಲಾಪ ಕೂಡ ಗೊಂದಲದ ಗೂಡಾದ ಪರಿಣಾಮ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.
ಸದನದೊಳಗೆ ರೇವಣ್ಣಗೆ ಮೊಬೈಲ್‌ನಿಂಗ ಗೌಡರ ಮಾರ್ಗದರ್ಶನ: ಸದನದಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ಪುತ್ರ ರೇವಣ್ಣಗೆ ಮಾಜಿ ಪ್ರಧಾನಿ ದೇವೇಗೌಡರು ಮೊಬೈಲ್ ಮೂಲಕ ಸಂಪರ್ಕಿಸಿ ಸಲಹೆ ನೀಡುತ್ತಿದ್ದದ್ದು ಕಂಡುಬಂತು. ಸಂಧಾನ ಸಭೆಯಲ್ಲಿ ಭಾಗವಹಿಸಿದ್ದ ರೇವಣ್ಣ ಅವರು ಒಂದೆರಡು ಬಾರಿ ಸಭೆಯಿಂದ ಹೊರಬಂದು ಗೌಡರೊಂದಿಗೆ ಮೊಬೈಲ್‌ನಲ್ಲಿ ಮಾತುಕತೆ ನಡೆಸುತ್ತಿದ್ದರು. ಅಷ್ಟೇ ಅಲ್ಲದೆ ಮಾಜಿ ಸಚಿವ ಬಂಡೆಪ್ಪ ಕಾಶಂಪರ್ ಅವರೂ ಗೌಡರೊಂದಿಗೆ ನಿರಂತರ ಸಂಪರ್ಕದಲ್ಲಿದ್ದುದು ಗುಟ್ಟಾಗಿ ಉಳಿದಿರಲಿಲ್ಲ. |