ನಗರದಲ್ಲಿ ಹೆಚ್ಚುತ್ತಿರುವ ಒಂಟಿ ಮಹಿಳೆ, ಜೋಡಿ ಕೊಲೆ, ದರೋಡೆ, ಕೊಲೆ, ಸುಲಿಗೆ, ಅಪಹರಣಗಳ ಬಗ್ಗೆ ಗುರುವಾರ ವಿಧಾನಪರಿಷತ್ ಕಲಾಪದಲ್ಲಿ ಬಿಸಿ, ಬಿಸಿ ಚರ್ಚೆಗೆ ವೇದಿಕೆಯಾಯಿತಲ್ಲದೇ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದವು.
ಬಿಜೆಪಿಯ ವಿಮಲಾಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ವಿ.ಎಸ್.ಆಚಾರ್ಯ, ಹೆಚ್ಚುತ್ತಿರುವ ಜನಸಂಖ್ಯೆಗೆ ಹೋಲಿಸಿದರೆ ಅಪರಾಧಗಳು ಕಡಿಮೆ. ನಮ್ಮ ಸರ್ಕಾರ ಬಂದ ಮೇಲೆ ಇಂತಹ ಪ್ರಕರಣಗಳು ಕಡಿಮೆಯಾಗಿವೆ ಎಂದರು. ಇದರಿಂದ ಸಮಾಧಾನಗೊಳ್ಳದ ಗೌಡ, ಕೊಲೆ ಮಾಡಿದರೂ ತಪ್ಪಿಸಿಕೊಳ್ಳುವುದಕ್ಕೆ ಕಾನೂನಿನಲ್ಲಿ ಸಾಕಷ್ಟು ದಾರಿಗಳಿವೆ. ಆದ್ದರಿಂದ ಕಾಯ್ದೆಗೆ ತಿದ್ದುಪಡಿ ತಂದು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ಸಚಿವರ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಲ್ಲಾಜಮ್ಮ, ಕಳೆದ ಅಧಿವೇಶನದಲ್ಲಿ ಇದೇ ರೀತಿಯ ಉತ್ತರ ನೀಡಲಾಗಿತ್ತು. ಗೃಹ ಇಲಾಖೆಯಲ್ಲಿ 6-8ಸಾವಿರ ಉತ್ತರ ಪ್ರತಿಗಳನ್ನು ಮುದ್ರಿಸಿ ಇಡಲಾಗಿದೆಯೇ ಎಂದು ಖಾರವಾಗಿ ಪ್ರಶ್ನಿಸಿದರು. ಮಹಿಳೆಯರಿಗೆ ರಕ್ಷಣೆ ನೀಡಲು ಸರ್ಕಾರಕ್ಕೆ ಆಸಕ್ತಿ ಇಲ್ಲ ಎಂದು ಮೋಟಮ್ಮ ಹೇಳಿದರೆ, ಮಂಗಳಸೂತ್ರಕ್ಕೆ ರಕ್ಷಣೆ ನೀಡದಿದ್ದರೆ ಹೇಗೆ?ಎಂದು ಪ್ರಕಾಶ್ ರಾಥೋಡ್ ಪ್ರಶ್ನಿಸಿದರು. |