ರಾಜ್ಯದ ಕೃಷ್ಣಾ ಕಣಿವೆಯ ನೀರಾವರಿ ಯೋಜನಾ ಪ್ರದೇಶಗಳಿಗೆ ಆಂಧ್ರಪ್ರದೇಶ ಶಾಸಕರ ಅನಧಿಕೃತ ಭೇಟಿಯ ಕುರಿತು ಕೇಂದ್ರ ಸರ್ಕಾರಕ್ಕೆ ದೂರು ನೀಡುವುದಾಗಿ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಆಂಧ್ರದ 12 ಮಂದಿ ಟಿಡಿಪಿ ಶಾಸಕರ ತಂಡ ಕೃಷ್ಣಾ ಕೊಳ್ಳದ ನೀರಾವರಿ ಯೋಜನಾ ಕಾಮಗಾರಿ ಸ್ಥಳಗಳಿಗೆ ಅನಧಿಕೃತ ಭೇಟಿ ನೀಡಿರುವ ಕುರಿತು ಸದನದಲ್ಲಿ ಹೇಳಿಕೆ ನೀಡಿದ ಸಚಿವರು, ಇದೊಂದು ರಾಜಕೀಯ ಪ್ರೇರಿತ ನಡವಳಿಕೆಯಾಗಿದ್ದು, ನ್ಯಾಯಾಧೀಕರಣದ ನಿರ್ದೇಶನದ ಉಲ್ಲಂಘನೆಯಾಗಿದೆ. ಇದು ಉಭಯ ರಾಜ್ಯಗಳ ನಡುವಿನ ಸೌಹಾರ್ದ ಸಂಬಂಧಕ್ಕೆ ಅಡ್ಡಿಯಾಗುತ್ತದೆ ಎಂದರು.
ನೆರೆಯ ಆಂಧ್ರಪ್ರದೇಶ ಕೃಷ್ಣಾ ನ್ಯಾಯಾಧೀಕರಣ-1ರ ಅಡಿ ಹಂಚಿಕೆಯಾಗಿರುವ ತನ್ನ ಪಾಲಿನ 800 ಟಿಎಂಸಿ ಪ್ರಮಾಣಕ್ಕಿಂತ ಅಧಿಕ ನೀರನ್ನು ಕಳೆದ ಸಾಲಿನಲ್ಲಿಯೇ ಬಳಕೆ ಮಾಡಿಕೊಂಡಿದೆ. ಇದೀಗ ಅನಧಿಕೃತ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಇದರಿಂದಾಗಿ ತನ್ನ ಅನಧಿಕೃತ ಯೋಜನೆಗಳಿಗೆ ಹೆಚ್ಚುವರಿ ನೀರು ಲಭ್ಯವಾಗಲಿದೆ ಎಂಬ ದುರುದ್ದೇಶದಿಂದ ಈ ನಿಯೋಗ ಭೇಟಿ ನೀಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. |