'ಏನ್ ಹುಚ್ ಗಿಚ್ ಹಿಡಿದಿದೆಯಾ?ಏನ್ ಮಾತಾಡ್ತಾ ಇದ್ದೀರಿ? ಬೇಗ ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಿ..ಹುಡುಗಾಟ ಆಡ್‌ತ್ತಿದ್ದೀರಾ? ಅಂತ ವಿಧಾನಪರಿಷತ್ ನಾಯಕ ವಿ.ಎಸ್.ಉಗ್ರಪ್ಪ ಅವರನ್ನು ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ಕೆಂಡಮಂಡಲರಾಗಿ ಜಾಡಿಸಿದ ಪರಿ ಇದು.
ಶುಕ್ರವಾರ ವಿಧಾನಪರಿಷತ್ ಕಲಾಪದಲ್ಲಿ, ಮೈಸೂರು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ನಾಗೇಂದ್ರ ಪ್ರಸಾದ್ ಮತ್ತು ಸರ್ವಶಿಕ್ಷಣ ಅಭಿಯಾನ ಸಮನ್ವಯಾ ಧಿಕಾರಿ ಶಿವರಾಮ್ ಅವರನ್ನು ತಕ್ಷಣವೇ ಅಮಾನತುಗೊಳಿಸಬೇಕೆಂದು ಉಗ್ರಪ್ಪ ಆಗ್ರಹಿಸಿದರು. ಅಲ್ಲದೇ ಈ ಅಧಿಕಾರಿಗಳನ್ನು ಉಳಿಸಿಕೊಳ್ಳಲು ಸರ್ಕಾರ ಹೆಣಗಾಡುತ್ತಿದೆ ಎಂದ ಅವರು, ಆ ಅಧಿಕಾರಿಗಳು ಆರ್‌ಎಸ್‌ಎಸ್ ಮೂಲದವರಾದ್ದರಿಂದ ಸರ್ಕಾರ ಅವರನ್ನು ರಕ್ಷಿಸಲು ಮುಂದಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು.
ಡಿಡಿಪಿಐ ಅಧಿಕಾರಿಗಳು ಆರ್‌ಎಸ್‌ಎಸ್ ಮೂಲದವರು ಎಂಬ ಮಾತು ಕಿವಿಗೆ ಬೀಳುತ್ತಿದ್ದಂತೆಯೇ ಇಂಧನ ಸಚಿವ ಈಶ್ವರಪ್ಪನವರು ಏಕಾಏಕಿ ಎದ್ದುನಿಂತು ತೀವ್ರವಾಗಿ ತರಾಟೆಗೆ ತೆಗೆದುಕೊಂಡು, ಬಾಯಿಗೆ ಬಂದಂತೆ ಮಾತಾಡಬೇಡಿ, ಯಾವ ಸಂಸ್ಥೆ ಬಗ್ಗೆ ಮಾತನಾಡುತ್ತಿದ್ದೀರಿ ಎಂಬ ಪ್ರಜ್ಞೆ ಇರಲಿ. ನಾಲಿಗೆ ಬಿಗಿ ಹಿಡಿದು ಮಾತಾಡಿ ಎಂದು ಉಗ್ರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು
ಈ ಪ್ರಕರಣ ಕಲಾಪಕ್ಕೆ ಅಡ್ಡಿ ಉಂಟು ಮಾಡಿದ್ದರಿಂದ ಸಭಾಧ್ಯಕ್ಷ ವೀರಣ್ಣ ಮತ್ತಿಕಟ್ಟಿ ಕಲಾಪವನ್ನು 10ನಿಮಿಷಗಳ ಕಾಲ ಮುಂದೂಡಿದರು.
ಡಿಡಿಪಿಐ ಅವರನ್ನು ಅಮಾನತುಗೊಳಿಸಬೇಕೆಂದು ನಿನ್ನೆಯಿಂದ ಜೆಡಿಎಸ್ ಸದಸ್ಯರು ಧರಣಿ ನಡೆಸುತ್ತಿದ್ದರು. ಇಂದು ಕೂಡ ತಮ್ಮ ಪಟ್ಟನ್ನು ಸಡಿಲಿಸದೆ ಧರಣಿ ಮುಂದುವರಿಸಿದ್ದರು. ಅದಕ್ಕೆ ಕಾಂಗ್ರೆಸ್ ಸದಸ್ಯರು ಸಾಥ್ ನೀಡಿದ್ದರು. ಅಧಿಕಾರಿಗಳನ್ನು ರಕ್ಷಣೆ ಮಾಡಲು ಸರ್ಕಾರ ಹೊರಟಿದೆ. ಅವರನ್ನು ಅಮಾನತು ಮಾಡದಂತೆ ರಾಜಕೀಯ ಒತ್ತಡವಿದೆ ಎಂದು ಜೆಡಿಎಸ್ ಸದಸ್ಯರು ಆಪಾದಿಸಿದ್ದರು. |