ಸುಬ್ರಹ್ಮಣ್ಯಪುರ ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿದ್ದ ಹೆಚ್.ಎ.ಎಲ್ ರಸ್ತೆ ವಿಮಾನ ನಿಲ್ದಾಣ ಠಾಣೆಯ ಅಪರಾಧ ವಿಭಾಗದ ಪೊಲೀಸ್ ಕಾನ್ಸ್‌ಟೇಬಲ್ ಎಂ.ಸಿ.ರಾಮಚಂದ್ರ (38) ಎಂಬವರನ್ನು ಗುರುವಾರ ಮಧ್ಯರಾತ್ರಿ ಚಾಕುವಿನಿಂದ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿ ಚರಂಡಿಗೆ ಎಸೆಯಲಾಗಿದೆ.
ಕನಕಪುರ ತಾಲೂಕು ಮುಲ್ಲಾಹಳ್ಳಿ ಗ್ರಾಮದ ವಾಸಿಯಾದ ಎಂ.ಸಿ.ರಾಮಚಂದ್ರ ಕಳೆದ 12 ವರ್ಷಗಳಿಂದ ಬೆಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ಇದೀಗ ಕಳೆದ ಒಂದು ವರ್ಷದಿಂದ ವಿಮಾನ ನಿಲ್ದಾಣ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ರಾಮಚಂದ್ರ ಅವರು ನಿನ್ನೆ ಕೆಲಸಕ್ಕೆ ಹೋಗಿರಲಿಲ್ಲವಾಗಿತ್ತು. ಸಂಬಂಧಿಕರೊಬ್ಬರ ನಾಮಕರಣ ಸಮಾರಂಭದಲ್ಲಿ ಭಾಗವಹಿಸಿ ಮನೆಗೆ ಬಂದಿದ್ದರು. ಮಧ್ಯರಾತ್ರಿ ಹೊರಗಿನಿಂದ ಪರಿಚಯದ ವ್ಯಕ್ತಿಗಳು ಹೆಸರು ಹೇಳಿ ಕರೆದಿದ್ದು, ಪೊಲೀಸರು ಬಂದಿದ್ದಾರೆ. ಕರ್ತವ್ಯಕ್ಕೆ ಹಾಜರಾಗುವಂತೆ ಕರೆಯುತ್ತಿದ್ದಾರೆ. ಹೊರಗೆ ಹೋಗಿ ಬರುವೆ ಎಂದು ಪತ್ನಿಗೆ ಹೇಳಿ ರಾಮಚಂದ್ರ ಹೊರಗೆ ಹೋಗಿದ್ದರು.
ಬೆಳಿಗ್ಗೆಯಾದರೂ ಪತಿ ಮನೆಗೆ ಬಂದಿರಲಿಲ್ಲ. ಆದರೆ ದೊಡ್ಡಕಲ್ಲಸಂದ್ರದಲ್ಲಿ ರಾಮಚಂದ್ರ ಅವರನ್ನು ಕೊಲೆ ಮಾಡಿರುವ ವಿಷಯವನ್ನು ಪತ್ನಿ ಸುಕನ್ಯಾ ಅವರಿಗೆ ಖಾಸಗಿ ಸಂಸ್ಥೆಯ ನೌಕರ ಅಂಕಪ್ಪ ಅವರು ತಿಳಿಸಿದ ಮೇಲೆ ವಿಷಯ ಗೊತ್ತಾಯಿತೆಂದು ಆಕೆ ಪೊಲೀಸರಿಗೆ ತಿಳಿಸಿದ್ದಾರೆ. |