ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಪ್ರವಾಹ ಸ್ಥಿತಿ ಕೂಡ ಹಾಗೆ ಮುಂದುವರಿದಿದೆ. ಮಳೆಗೆ ಒಟ್ಟು ಎಂಟು ಮಂದಿ ಬಲಿಯಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದರೆ. ಉಡುಪಿ, ದಕ್ಷಿಣ ಕನ್ನಡ, ಹಾನಗಲ್ ಹಾಗೂ ರಾಣಿಬೆನ್ನೂರ್ ತಾಲೂಕಿನಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ. ಕಬಿನಿ ಹಿನ್ನೀರಿನಲ್ಲಿ ಒಳಹರಿವು ಹೆಚ್ಚಿಗೆ ಇದ್ದಾಗ ಮೀನು ಹಿಡಿಯಲು ಹೋದ ಇಬ್ಬರು ಹರಿಗೋಲು ಸಹಿತ ನಾಪತ್ತೆಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 24ಗಂಟೆಗಳಲ್ಲಿ 14ಮನೆಗಳು ಕುಸಿತವಾಗಿವೆ. ಸುಬ್ರಹ್ಮಣ್ಯ ಪರಿಸರದಲ್ಲಿ ಗುರುವಾರ ರಾತ್ರಿ ಕುಮಾರಧಾರ ಸೇತುವೆ ಎರಡನೇ ಬಾರಿ ಮುಳುಗಿದೆ. ಅಲ್ಲದೇ ಹೊಸನಗರ, ಸಾಗರ, ತೀರ್ಥಹಳ್ಳಿಯಲ್ಲಿಯೂ ಮಳೆಯ ಅಬ್ಬರ ತೀವ್ರವಾಗಿದೆ. ದಾವಣಗೆರೆಯ ಹೊನ್ನಾಳಿಯಲ್ಲಿ 40ಕುಟುಂಬ ಸೇರಿ ಹರಿಹರ ತಾಲೂಕಿನ 22 ಗ್ರಾಮ, ಹರಪನಹಳ್ಳಿ ತಾಲೂಕಿನ ಹಲುವಾಗಲು, ಗರ್ಭಗುಡಿ, ನಿಟ್ಟೂರು, ನಂದ್ಯಾಲ, ಕಡತಿ ಗ್ರಾಮದ ಜನರಿಗೆ ಮುಳುಗಡೆ ಭೀತಿ ಎದುರಾಗಿದೆ.
ಕಾರವಾರದಲ್ಲಿ ಹಡಗು ಅವಾಂತರ: ಬಿರುಗಾಳಿ, ಮಳೆಗೆ ಸಿಲುಕಿ ಅರಬ್ಬಿ ಸಮುದ್ರದಲ್ಲಿರುವ ಕೂರ್ಮಗಡ ದ್ವೀಪದ ಬಳಿ ಶುಕ್ರವಾರ ಕಲ್ಲುಬಂಡೆಗೆ ಸಿಕ್ಕಿ ಹಾಕಿಕೊಂಡಿರುವ ಸರಕು ಸಾಗಣೆ ಹಡಗನ್ನು ಬಂದರು ಇಲಾಖೆ ಅಧಿಕಾರಿ ಕ್ಯಾಪ್ಟನ್ ಸ್ವಾಮಿ ನೇತೃತ್ವದ ತಂಡ ಐದು ಗಂಟೆ ಕಾರ್ಯಾಚರಣೆ ನಡೆಸಿ ಅಪಾಯದಿಂದ ಪಾರು ಮಾಡಿದೆ. |