ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನ್ಯಾಯಮೂರ್ತಿಗಳನ್ನೇ ಬ್ಲ್ಯಾಕ್‌ಮೇಲ್ ಮಾಡಲು ಹೊರಟಿರುವ ಇಸ್ಕಾನ್ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಹೈಕೋರ್ಟ್ ಅಭಿಪ್ರಾಯವ್ಯಕ್ತಪಡಿಸಿದೆ.ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ನ್ಯಾಯಮೂರ್ತಿಗಳನ್ನು ಬ್ಲ್ಯಾಕ್‌ಮೇಲ್ ಮಾಡಲು ಯತ್ನಿಸಿದವರು ಬೇಷರತ್ ಕ್ಷಮೆ ಯಾಚಿಸಿದರೆ ಸರಿ. ಇಲ್ಲವಾದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನ್ಯಾ.ಕೆ.ಎಲ್.ಮಂಜುನಾಥ್ ಮತ್ತು ನ್ಯಾ.ಕುಮಾರಸ್ವಾಮಿ ಅವರಿದ್ದ ವಿಭಾಗೀಯ ಪೀಠ ಎಚ್ಚರಿಸಿದೆ.ನ್ಯಾಯಮೂರ್ತಿಗಳನ್ನು ಬ್ಲ್ಯಾಕ್‌ಮೇಲ್ ಮಾಡಲು ತಾವು ಪ್ರಯತ್ನಿಸಿಲ್ಲ ಎಂದು ಮುಂಬೈ ಇಸ್ಕಾನ್ ಮತ್ತು ಬೆಂಗಳೂರು ಇಸ್ಕಾನ್ ಪರ ವಕೀಲರು ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಹೀಗಾಗಿ ಯಾರು ಈ ಕೆಲಸ ಮಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ. ಹಾಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕಾಗುತ್ತದೆ ಎಂದು ನ್ಯಾ.ಕೆ.ಎಲ್.ಮಂಜುನಾಥ್ ಹೇಳಿದರು.ವಿವಾದದ ಹಿನ್ನೆಲೆ: ಬೆಂಗಳೂರಿನಲ್ಲಿರುವ ಇಸ್ಕಾನ್ ದೇವಾಲಯದ ಒಡೆತನಗಳ ಬಗ್ಗೆ ಬೆಂಗಳೂರು ಇಸ್ಕಾನ್ ಮತ್ತು ಮುಂಬೈ ಇಸ್ಕಾನ್ ಮಧ್ಯೆ ಜಟಾಪಟಿ ನಡೆದಿದ್ದು, ಅಧೀನ ನ್ಯಾಯಾಲಯ ಬೆಂಗಳೂರು ಪರ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ನ್ಯಾ.ಕೆ.ಎಲ್.ಮಂಜುನಾಥ್ ಮತ್ತು ನ್ಯಾ.ಸಿ.ಆರ್.ಕುಮಾರಸ್ವಾಮಿ ಅವರಿದ್ದ ಪೀಠದ ಮುಂದೆ ನಿಗದಿಪಡಿಸಲಾಗಿತ್ತು.ಈ ಮಧ್ಯೆ ನ್ಯಾ.ಮಂಜುನಾಥ್ ಮತ್ತು ನ್ಯಾ.ಕುಮಾರಸ್ವಾಮಿ ಅವರಿಗೆ ಮುಂಬೈ ಇಸ್ಕಾನ್ ಮುಖ್ಯಸ್ಥರ ಹೆಸರಲ್ಲಿ ಪತ್ರವೊಂದು ಬಂದಿತ್ತು. ಇದರಲ್ಲಿ 2003ರಲ್ಲಿ ನ್ಯಾ.ಮಂಜುನಾಥ್ ಇಸ್ಕಾನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಚಿತ್ರ ಇತ್ತಲ್ಲದೆ. ಅಂದಿನಿಂದ ನ್ಯಾಯಮೂರ್ತಿಗಳು ಬೆಂಗಳೂರು ಇಸ್ಕಾನ್ ಜತೆ ನಿಕಟ ಸಂಪರ್ಕದಲ್ಲಿದ್ದಾರೆ. ದೇವಸ್ಥಾನದಿಂದ ಕಾಣಿಕೆಗಳನ್ನು ಪಡೆಯುತ್ತಿದ್ದಾರೆ. ಆದ್ದರಿಂದ ಅವರು ಈ ಅರ್ಜಿ ವಿಚಾರಣೆ ನಡೆಸುವುದು ಸರಿಯೇ ಎಂದು ಪ್ರಶ್ನಿಸಲಾಗಿತ್ತು. |