ನಗರದ ಪಾಂಡೇಶ್ವರ ಅಶ್ವತ್ಥಕಟ್ಟೆಯಲ್ಲಿ ಇರಿಸಿದ್ದ ಈಶ್ವರ ದೇವರ ಮೂರ್ತಿಯನ್ನು ಗುರುವಾರ ರಾತ್ರಿ ದುಷ್ಕರ್ಮಿಗಳು ಕಲ್ಲೆಸೆದು ಭಾಗಶಃ ಹಾನಿ ಮಾಡಿ ವಿಕಾರಗೊಳಿಸಿದ ಘಟನೆ ನಡೆದಿದೆ. ಇದರಿಂದ ಸುತ್ತಮುತ್ತಲಿನ ಜನ ಗುಂಪು ಸೇರುವ ಮೂಲಕ ಉದ್ರಿಕ್ತ ವಾತಾವರಣ ನೆಲೆಸಿತ್ತು.
ಈಶ್ವರ ಮೂರ್ತಿ ಭಗ್ನಗೊಳಿಸಿದ ಘಟನೆ ತಿಳಿಯುತ್ತಿದ್ದಂತೆ ಗುಂಪು ಸೇರಿದ ಜನರಿಂದಾಗಿ ಪರಿಸ್ಥಿತಿ ಉದ್ರಿಕ್ತವಾಗುವ ಸಾಧ್ಯತೆ ಕಂಡು ಬಂದಾಗ ಪಾಂಡೇಶ್ವರ ಪೊಲೀಸರು ಆಗಮಿಸಿ ಜನರನ್ನು ಚದುರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಎ.ಬಿ.ಶೆಟ್ಟಿ ವೃತ್ತದಿಂದ ಮಂಗಳಾದೇವಿ ಕಡೆಗೆ ಹೋಗುವ ರಸ್ತೆಯಲ್ಲಿ ಪಾಂಡೇಶ್ವರ ಬಳಿ ಅಶ್ವತ್ಥಕಟ್ಟೆ ನಿರ್ಮಿಸಲಾಗಿದ್ದು, ಅದರಲ್ಲಿ ಸಿಮೆಂಟ್ ನಿರ್ಮಿತ ಈಶ್ವರ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ನಿನ್ನೆ ರಾತ್ರಿ ಕಿಡಿಗೇಡಿಗಳು ಕಲ್ಲೆಸೆದು ಮೂರ್ತಿಯ ಕುತ್ತಿಗೆ ಮತ್ತು ಭುಜದ ಭಾಗವನ್ನು ವಿರೂಪಗೊಳಿಸಿದ್ದರು.
ಈ ಕುರಿತು ಪಾಂಡೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡು ಆರೋಪಿಗಳ ಶೋಧದಲ್ಲಿ ತೊಡಗಿದ್ದಾರೆ. ವಿರೂಪಗೊಂಡ ಮೂರ್ತಿಯನ್ನು ಅಲ್ಲಿಂದ ತೆರವುಗೊಳಿಸಲಾಗಿದೆ. ಹಿಂದೂ ಸಂಪ್ರದಾಯದಂತೆ ವಿರೂಪಗೊಂಡ ಮೂರ್ತಿಯನ್ನು ಪೂಜಿಸಬಾರದು. |