ಕರ್ನಾಟಕ ಗೃಹಮಂಡಳಿಯಲ್ಲಿ ನಡೆದಿರುವ ಭೂ ಖರೀದಿ ಹಗರಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕೈವಾಡ ಇರುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಸಂಸದ ಎಚ್.ಡಿ.ಕುಮಾರಸ್ವಾಮಿ ಅವರು ಗಂಭೀರವಾಗಿ ಆರೋಪಿಸಿದರು.ಈ ಹಗರಣದಲ್ಲಿ ಮುಖ್ಯಮಂತ್ರಿಗಳು ಹಾಗೂ ಮಾಜಿ ವಸತಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರ ಪಾತ್ರವೂ ಇದೆ ಎಂದು ಅವರು ಶನಿವಾರ ಪಕ್ಷದ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.ಯಡಿಯೂರಪ್ಪ ಅವರ ಕುಟುಂಬದ ಸದಸ್ಯರು ಹಾಗೂ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರು ಹೈದರಾಬಾದ್‌ನಲ್ಲಿ ನಡೆಸುತ್ತಿರುವ ವ್ಯವಹಾರಗಳ ಬಗ್ಗೆ ಶೀಘ್ರವೇ ದಾಖಲೆಗಳ ಸಮೇತ ಬಹಿರಂಗಪಡಿಸುವುದಾಗಿ ಹೇಳಿದರು.ತಮ್ಮ ಅಧಿಕಾರಾವಧಿ ಸೇರಿದಂತೆ ಕಳೆದ 5ವರ್ಷಗಳಲ್ಲಿ ಗೃಹ ಮಂಡಳಿ ನಡೆಸಿರುವ ಭೂಖರೀದಿ ವ್ಯವಹಾರ ಕುರಿತು ತನಿಖೆ ಮಾಡಿಸುವ ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು,ತಾವು ರೈತರ ಪರವಾಗಿ ಯಾವ ನಿರ್ಧಾರ ಕೈಗೊಂಡಿದ್ದೇನೆ. ಬಿಜೆಪಿ ಸರ್ಕಾರ ರೈತರ ಪರ ಯಾವ ನಿಲುವು ತಳೆದಿದೆ ಎಂಬುದು ತನಿಖೆಯಿಂದ ತಿಳಿಯಲಿ ಎಂದರು. |