ನವಮಂಗಳೂರು ಬಂದರಿನಿಂದ ಚೀನಾಕ್ಕೆ ಹೊರಟಿದ್ದ ಸರಕು ಸಾಗಣೆ ಹಡಗೊಂದು ಕರಾವಳಿಯಿಂದ ಆರು ನಾಟಿಕಲ್ ಮೈಲು ದೂರದಲ್ಲಿ ಶುಕ್ರವಾರ ಅಪಾಯಕ್ಕೆ ಸಿಲುಕಿದ್ದು, ಕೊನೆಗೂ ಹಡಗನ್ನು ಸುರಕ್ಷಿತವಾಗಿ ದಡಕ್ಕೆ ತರುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಶನಿವಾರ ಅದಿರು ಸಹಿತ ಹಡಗು ಸಮುದ್ರಪಾಲಾಗಿದೆ. ಅದರಲ್ಲಿದ್ದ 18 ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ.
ನವಮಂಗಳೂರು ಬಂದರಿನಿಂದ ಶುಕ್ರವಾರ ಬೆಳಿಗ್ಗೆ 9.30ರ ಹೊತ್ತಿಗೆ 13,600 ಟನ್ ಕಬ್ಬಿಣದ ಅದಿರನ್ನು ಹೊತ್ತುಕೊಂಡು ಪ್ರಯಾಣ ಆರಂಭಿಸಿದ್ದ 'ಎಂ.ವಿ. ಏಷಿಯನ್ ಫಾರೆಸ್ಟ್' ಎಂಬ ಹಾಂಕಾಂಗ್ ಹಡಗು ಚೀನಾದತ್ತ ಹೊರಟಿತ್ತು. ಕರಾವಳಿಯಿಂದ ಸುಮಾರು 37 ಕಿ.ಮೀ. ದೂರ ಸಾಗುತ್ತಿದ್ದಂತೆ ಹಡಗು ಸಮತೋಲನ ಕಳೆದುಕೊಳ್ಳಲಾರಂಭಿಸಿತು. ಹಡಗಿಗೆ ಅದಿರು ತುಂಬುವ ಸಂದರ್ಭದಲ್ಲಿ ಮಳೆ ನೀರು ಕೂಡ ಸೇರಿಕೊಂಡಿದ್ದರ ಪರಿಣಾಮ ಪ್ರಯಾಣದ ಸಂದರ್ಭದಲ್ಲಿ ಹಡಗು ಅತ್ತಿತ್ತ ಓಲಾಡಲು ಕಾರಣವಾಯಿತು. ಇದರಿಂದಾಗಿ ಅದಿರು ಹಡಗಿನ ಒಂದೇ ಬದಿಗೆ ಸೇರಿಕೊಂಡ ಕಾರಣ ಹಡಲು ಸಮತೋಲನ ಕಳೆದುಕೊಂಡಿತ್ತು.
ತಕ್ಷಣವೇ ಹಡಗಿನ ಕ್ಯಾಪ್ಟನ್ ನವಮಂಗಳೂರು ಬಂದರು ಮಂಡಳಿಯ ಮರೈನ್ ವಿಭಾಗಕ್ಕೆ ಮಾಹಿತಿ ಕೊಟ್ಟರು. ನಂತರ ಕರಾವಳಿ ತಟ ರಕ್ಷಣಾ ಪಡೆಯವರು ಕೂಡ ಸ್ಥಳಕ್ಕಾಗಮಿಸಿ ಹಡಗಿನಲ್ಲಿದ್ದ ಚೀನಾದ 18 ಸಿಬ್ಬಂದಿಗಳನ್ನು ಅಪಾಯದಿಂದ ಪಾರು ಮಾಡಿದ್ದರು,
ಎಡೆಬಿಡದೆ ಬರುತ್ತಿರುವ ಭಾರೀ ಮಳೆ ಮತ್ತು ಗಾಳಿಯ ಕಾರಣ ಕಡಲು ಕೂಡ ಪ್ರಕ್ಷ್ಯುಬ್ದ ಸ್ಥಿತಿ ತಲುಪಿದೆ. ಹಾಗಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಅಭಿಪ್ರಾಯಪಡಲಾಗಿತ್ತು. ಆರಂಭದಲ್ಲಿ 15 ಡಿಗ್ರಿಗಳಷ್ಟು ವಾಲಿದ್ದ ಹಡಗು ಸಂಜೆ ಹೊತ್ತಿಗೆ 30 ಡಿಗ್ರಿ ವಾಲಿಕೊಂಡಿತ್ತು. ಹಡಗನ್ನು ರಕ್ಷಿಸಲು ಮುಂಬೈಯಿಂದ ಬರಲು ರಕ್ಷಣಾ ತಂಡ ನಿರಾಕರಿಸಿತ್ತು. ಆದರೆ ಸಂಜೆ ವೇಳೆಗೆ ಸಿಂಗಾಪುರದಿಂದ ರಕ್ಷಣಾ ತಂಡ ಆಗಮಿಸುವ ವೇಳೆಗಾಗಲೇ ಹಡಗು ಕಡಲಗರ್ಭದೊಳಕ್ಕೆ ಸೇರಿತ್ತು. |