ಮುಂಗಾರು ಮಳೆಯ ಮುನಿಸಿನಿಂದಾಗಿ ತೀವ್ರ ಹಾನಿಗೊಳಗಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ತುರ್ತು ಪರಿಹಾರಕ್ಕಾಗಿ ಕರ್ನಾಟಕ ಸರ್ಕಾರ ತಲಾ 5 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ ಎಂದು ಗೃಹ ಸಚಿವ ಡಾ. ವಿ.ಎಸ್. ಆಚಾರ್ಯ ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಹಾನಿ ಕುರಿತಂತೆ ಶುಕ್ರವಾರ ವಿಧಾನ ಪರಿಷತ್‌ನಲ್ಲಿ ಕಂದಾಯ ಸಚಿವರ ಪರವಾಗಿ ಸ್ವಪ್ರೇರಣೆ ಹೇಳಿಕೆ ನೀಡಿದ ಅವರು ಹಾನಿಗೊಳಗಾದ ಉಳಿದ ಜಿಲ್ಲೆಗಳಿಗೂ ಅಗತ್ಯಕ್ಕೆ ಅನುಗುಣವಾಗಿ 1 ಕೋಟಿಯಿಂದ 2 ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ಕ್ರಮಕೈಗೊಳ್ಳಲಾಗಿದೆ. ಅಲ್ಲದೆ, ಪ್ರಕೃತಿ ವಿಕೋಪದ ಹಾನಿಯ ತುರ್ತು ಪರಿಹಾರಕ್ಕಾಗಿ ಲಭ್ಯವಿರುವ ಹಣವನ್ನು ಬಳಸಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಉಡುಪಿಯಲ್ಲಿ 1231 ಮಿ.ಮೀ, ದಕ್ಷಿಣ ಕನ್ನಡ 1022ಮಿ.ಮೀ., ಉತ್ತರ ಕನ್ನಡ 925ಮಿ.ಮೀ., ಕೊಡಗು 883ಮಿ.ಮೀ., ಶಿವಮೊಗ್ಗ 778ಮಿ.ಮೀ, ಚಿಕ್ಕಮಗಳೂರು 600ಮಿ.ಮೀ., ಹಾಸನ 242ಮಿ.ಮೀ., ಬೆಳಗಾಂ 212ಮಿ.ಮೀ., ಹಾವೇರಿ 190ಮಿ.ಮೀ., ಧಾರವಾಡ 145ಮಿ.ಮೀ., ಚಿತ್ರದುರ್ಗ 103ಮೀ.ಮೀ. ಅಧಿಕ ಮಳೆಯನ್ನು ಕಂಡ ಜಿಲ್ಲೆಗಳಾಗಿವೆ.
ಜಿಲ್ಲೆಗಳಲ್ಲಿನ ಪ್ರವಾಹ ಪರಿಸ್ಥಿತಿ ಎದುರಿಸಲು ಎಲ್ಲಾ ಸಿದ್ಧತೆಗಳೊಂದಿಗೆ ಸನ್ನದ್ಧರಾಗಿರುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದ್ದು ಈಗಾಗಲೇ ನಿಯಂತ್ರಣ ಕೊಠಡಿಗಳನ್ನು ಪ್ರಾರಂಭಿಸಿ, ವೈಯರ್‍ಲೆಸ್ ಸಂಪರ್ಕ ಅಳವಡಿಸಿಕೊಂಡಿರುತ್ತಾರೆ. ಪ್ರವಾಹ ಪೀಡಿತರಿಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ ಅಗತ್ಯ ಊಟ, ವಸತಿ ಮತ್ತು ಔಷಧೋಪಚಾರಗಳನ್ನು ಒದಗಿಸಲಾಗಿದೆ. ಕರಾವಳಿ ಜಿಲ್ಲೆಗಳಿಗೆ ಹೆಚ್ಚುವರಿಯಾಗಿ ರಕ್ಷಣಾ ಕೆಲಸಕ್ಕೆ ತಮಿಳುನಾಡಿನ ಅರಕೋಣಂನಿಂದ ನ್ಯಾಷನಲ್ ಡಿಸಾಸ್ಟರ್ ರೆಸ್ಪಾನ್ಸ್ ಫೋರ್ಸನ 89 ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಮತ್ತು 11 ಇನ್‌ಫ್ಲೇಟಬಲ್ ಬೋಟ್‌ಗಳನ್ನು ಸುರಕ್ಷಿತಾ ಕೆಲಸಗಳಿಗೆ ಬಳಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು. |