ತಮಿಳು ಕವಿ ತಿರುವಳ್ಳುವರ್ ಪ್ರತಿಮೆಯನ್ನು ಬೆಂಗಳೂರಿನಲ್ಲಿ ತರಾತುರಿಯಲ್ಲಿ ಅನಾವರಣ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ನಾರಾಯಣ ಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸಿದೆ.
ತಿರುವಳ್ಳುವರ್ ಪ್ರತಿಮೆಯನ್ನು ಆಗಸ್ಟ್ 9ರಂದು ಕರ್ನಾಟಕದಲ್ಲಿ ಅನಾವರಣ ಮಾಡುವುದಾಗಿ ತಮಿಳುನಾಡಿನ ಮುಖ್ಯಮಂತ್ರಿ ಕರುಣಾನಿಧಿಯವರಿಗೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿರುವ ಕ್ರಮ ಸರಿಯಲ್ಲ. ಇದರಿಂದ ರೈತಪರ, ದಲಿತಪರ ಮತ್ತು ಕನ್ನಡಪರ ಸಂಘಟನೆಗಳ ಸ್ವಾಭಿಮಾನದ ಹೋರಾಟಕ್ಕೆ ಮಸಿ ಬಳಿದಂತಾಗಿದೆ ಎಂದು ಕರವೇಯ ರಾಜ್ಯ ಘಟಕದ ಅಧ್ಯಕ್ಷ ಗೌಡ ಹೇಳಿದರು.
ಶನಿವಾರ ಖಾಸಗಿ ಹೊಟೇಲ್‌ವೊಂದರಲ್ಲಿ ನಡೆದ ಸಭೆಯ ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತ ತಿಳಿಸಿದರು.
ತಿರುವಳ್ಳುವರ್ ಪ್ರತಿಮೆಯನ್ನು ಕರ್ನಾಟಕದಲ್ಲಿ ಅನಾವರಣ ಮಾಡುವುದಾದರೆ ಅದೇ ದಿನ ಸರ್ವಜ್ಞ ಅವರ ಪ್ರತಿಮೆಯನ್ನು ತಮಿಳುನಾಡಿನಲ್ಲಿ ಅನಾವರಣ ಮಾಡಬೇಕು. ಅಲ್ಲದೇ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಿರುವುದನ್ನು ಪ್ರಶ್ನಿಸಿ ಚೆನ್ನೈನ ಹೈಕೋರ್ಟ್‌ನಲ್ಲಿ ಆರ್.ಗಾಂಧಿಯವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. |