ರಾಜ್ಯದ 5ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿ ಹಾಗೂ ವಿರೋಧ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್‌ಗೆ ಪ್ರತಿಷ್ಠೆಯ ಕಣವಾಗಿದೆ.
ಆಗೋಸ್ಟ್ 18ರಂದು ಐದು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಶತಾಯಗತಾಯ ಚುನಾವಣೆಯಲ್ಲಿ ಮೇಲುಗೈ ಸಾಧಿಸಲು ಈಗಿಂದೀಗಲೇ ಪಕ್ಷಗಳ ಮುಖಂಡರು ಕಾರ್ಯೋನ್ಮುಖರಾಗಿದ್ದಾರೆ. ಒಂದೆಡೆ ಅಧಿವೇಶನ, ಮತ್ತೊಂದೆಡೆ ಉಪಚುನಾವಣೆಯ ಅಡಕತ್ತರಿಯಲ್ಲಿ ಸಿಕ್ಕಿರುವ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆ ಕಸರತ್ತಿನಲ್ಲಿ ತೊಡಗಿವೆ.
ಉಪಚುನಾವಣೆ ನಡೆಯಲಿರುವ ಚಿತ್ತಾಪುರ್, ಗೋವಿಂದರಾಜನಗರ, ಚನ್ನಪಟ್ಟಣ ಕೊಳ್ಳೇಗಾಲ ಈ ಹಿಂದೆ ಕಾಂಗ್ರೆಸ್ ತೆಕ್ಕೆಯಲ್ಲಿದ್ದರೆ, ರಾಮನಗರ ಜೆಡಿಎಸ್ ವಶದಲ್ಲಿತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿ 28ಕ್ಷೇತ್ರಗಳ ಪೈಕಿ 19ರಲ್ಲಿ ಬಿಜೆಪಿ ಮೇಲುಗೈ ಸಾಧಿಸಿದ್ದರೂ ಕೂಡ ಈ ಉಪಚುನಾವಣೆ ಆಡಳಿತ ಪಕ್ಷಕ್ಕೆ ಸುಲಭ ತುತ್ತಾಗಿಲ್ಲ.
ಕಾಂಗ್ರೆಸ್ 6ರಲ್ಲಿ, ಜೆಡಿಎಸ್ 3ರಲ್ಲಿ ಜಯಗಳಿಸಿದ್ದು, ಆದರೆ ಈ ಉಪಚುನಾವಣೆಯಲ್ಲಿ ಇವೆರಡೂ ಪಕ್ಷಗಳು ಬಿಜೆಪಿಗೆ ಪ್ರಬಲ ಪೈಪೋಟಿ ನೀಡುವತ್ತ ಅಖಾಡ ಸಿದ್ದಪಡಿಸತೊಡಗಿವೆ.
ಗೋವಿಂದರಾಜನಗರದ ಕಾಂಗ್ರೆಸ್ ಶಾಸಕರಾಗಿದ್ದ ವಿ.ಸೋಮಣ್ಣ ಪಕ್ಷಕ್ಕೆ ಗುಡ್‌ಬೈ ಹೇಳಿ ಬಿಜೆಪಿ ಪಾಳಯಕ್ಕೆ ಸೇರಿ ಸಚಿವಗಿರಿ ಅಲಂಕರಿಸಿದ್ದಾರೆ. ಚನ್ನಪಟ್ಟಣ ಕಾಂಗ್ರೆಸ್ ಶಾಸಕರಾಗಿದ್ದ ಸಿ.ಪಿ.ಯೋಗೀಶ್ವರ್ ಬಿಜೆಪಿ ಸೇರ್ಪಡೆಗೊಂಡಿದ್ದರೆ, ರಾಮನಗರ ಕ್ಷೇತ್ರದ ಶಾಸಕ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸಂಸದರ ಆಯ್ಕೆಯಾಗಿದ್ದಾರೆ. ಕೊಳ್ಳೇಗಾಲ ಕ್ಷೇತ್ರದ ಶಾಸಕ ಧ್ರುವನಾರಾಯಣ್ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದು, ಚಿತ್ತಾಪುರ್ ಶಾಸಕ ಮಲ್ಲಿಕಾರ್ಜುನ ಖರ್ಗೆ ಗುಲ್ಬರ್ಗಾ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ತೆರವಾದ ಐದು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ. |