ಕರ್ನಾಟಕ ಹೌಸಿಂಗ್ ಬೋರ್ಡ್‌ನ ಭ್ರಷ್ಟಾಚಾರ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸದೇ ಹಾಗೇ ಮುಂದುವರಿಸಿದಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಶನಿವಾರ ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೋರ್ಡ್‌ನ ಭ್ರಷ್ಟಾಚಾರದ ಬಗ್ಗೆ ಸಿಬಿಐ ಅಥವಾ ಲೋಕಾಯುಕ್ತ ತನಿಖೆ ನಡೆಸುವಂತೆ ಪ್ರತಿಪಕ್ಷಗಳು ಆಗ್ರಹಿಸುತ್ತಿದ್ದರೂ ಸರ್ಕಾರ ಗಣನೆಗೆ ತೆಗೆದುಕೊಳ್ಳದೆ ತಿರಸ್ಕರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಆಡಳಿತಯಂತ್ರ ಕುಸಿದಿದೆ. ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ರೈತರ ಸಂಕಷ್ಟಗಳಿಗೆ ಕವಡೆಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಎಂದು ಟೀಕಿಸಿದರು.
ಶಾಲಾ-ಕಾಲೇಜುಗಳಲ್ಲಿ ಆರ್ಎಸ್ಎಸ್ ಜನರು ಬಂದು ಕೇಸರಿಕರಣದ ಪ್ರಯತ್ನ ಮಾಡುವ ಕೆಳಮಟ್ಟಕ್ಕೆ ಇಳಿಯಲಾಗಿದೆ. ಲೋಕಾಯುಕ್ತರು ಕರ್ನಾಟಕದಲ್ಲಿನ ಭ್ರಷ್ಟಾಚಾರದ ಕುರಿತು ಹೇಳಿದ್ದಾರೆ. ಯಡಿಯೂರಪ್ಪ ಸರ್ಕಾರದಲ್ಲಿ ಆಗುತ್ತಿರುವ ಭ್ರಷ್ಟಾಚಾರ ದೇಶದ ಯಾವ ಸರ್ಕಾರದಲ್ಲೂ ಇಲ್ಲ. ಭ್ರಷ್ಟಾಚಾರ ನಿರ್ಮೂಲನೆಗೆ ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ನೀಡಬೇಕು ಎಂದು ಈ ಸಂದರ್ಭದಲ್ಲಿ ಆಗ್ರಹಿಸಿದರು. |