ಸರ್ಕಾರ ಮತ್ತು ಮುಖ್ಯಮಂತ್ರಿ ಮೇಲೆ ಮಾಡಿರುವ ಆರೋಪಗಳನ್ನು ಹಿಂಪಡೆದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕ್ಷಮೆ ಕೇಳಬೇಕು, ಇಲ್ಲವೇ ಆರೋಪಕ್ಕೆ ದಾಖಲೆಗಳನ್ನು ಬಹಿರಂಗಪಡಿಸಬೇಕು. ಇಲ್ಲದಿದ್ರೆ ರಾಜ್ಯ ಸರ್ಕಾರ ಮಾನನಷ್ಟ ಮೊಕದ್ದಮೆ ಹೂಡಬೇಕಾಗುತ್ತದೆ ಎಂದು ಬಿಜೆಪಿ ಎಚ್ಚರಿಸಿದೆ.ಭಾನುವಾರ ಸಚಿವರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಆರ್.ಅಶೋಕ್, ಬಿ.ಎನ್.ಬಚ್ಚೇಗೌಡ, ಸಂಸದ ಡಿ.ಬಿ.ಚಂದ್ರೇಗೌಡ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕುಮಾರಸ್ವಾಮಿ ಅವರಿಗೆ ಈ ಎಚ್ಚರಿಕೆ ನೀಡಿದರು. ವಸತಿ ಹಗರಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪಾಲೂ ಇದೆ ಎಂದು ಕುಮಾರಸ್ವಾಮಿ ಶುಕ್ರವಾರ ಆರೋಪಿಸಿದ್ದರು.ಸುಳ್ಳನ್ನೇ ನೂರು ಬಾರಿ ಹೇಳಿ ಸತ್ಯ ಎಂದು ಜನರಿಗೆ ಮೋಸ ಮಾಡಲು ಕುಮಾರಸ್ವಾಮಿ ಆರೋಪಿಸಿದ್ದಾರೆ. ಈ ಪ್ರಯತ್ನದಲ್ಲಿ ಅವರು ಸಫಲವಾಗುವುದಿಲ್ಲ. ಕಳೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಜನತೆ ಇವರನ್ನು ವಿಶ್ವಾಸದ್ರೋಹಿಗಳೆಂದು ತಿರಸ್ಕರಿಸಿದ್ದರೂ ಮುಖ್ಯಮಂತ್ರಿ ಮತ್ತು ಸರ್ಕಾರದ ಜನಪ್ರಿಯತೆಯನ್ನು ಸಹಿಸಲಾಗದೆ ಮೈ ಪರಚಿಕೊಂಡು ಈ ರೀತಿ ಆಪಾದನೆ ಮಾಡುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.ಅಲ್ಲದೇ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಮನಗರದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯಕ್ಕೆ ಜಮೀನು ಸ್ವಾಧೀನ ಪಡಿಸಿಕೊಂಡ ಹಗರಣ ಈಗಾಗಲೇ ತನಿಖೆಯಲ್ಲಿದೆ. ಭೂಮಿ ವಶಪಡಿಸಿಕೊಳ್ಳದೆ ಟೆಂಡರ್ ಮಾಡಿ 300ಕೋಟಿ ರೂಪಾಯಿ ಅಂದಾಜನ್ನು 375ಕೋಟಿ ರೂಪಾಯಿಗೆ ಹೆಚ್ಚಿಸಿ ಹೈದರಾಬಾದ್ ಗುತ್ತಿಗೆದಾರರಿಗೆ 33ಕೋಟಿ ರೂಪಾಯಿ ಮುಂಗಡ ಕೊಟ್ಟಿದ್ದಾರೆ. ಬಿಜೆಪಿ ಸರ್ಕಾರ ಬಂದ ಮೇಲೆ ಹಗರಣವನ್ನು ಬಯಲಿಗೆಳೆದಿದೆ ಎಂದು ಹೇಳಿದರು. |