ರಾಮನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ತಾವು ಸ್ಪರ್ಧಿಸುವ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಈ ಬಗ್ಗೆ ಕುಟುಂಬದಲ್ಲಿ ಚರ್ಚೆ ನಡೆದಿಲ್ಲ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ತಿಳಿಸಿದ್ದಾರೆ.
ರಾಮನಗರ ಕ್ಷೇತ್ರದಿಂದ ತಮ್ಮನ್ನು ಸ್ಪರ್ಧಿಸುವಂತೆ ಆ ಭಾಗದ ಜನರು ಎಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೇಗೌಡರ ಬಳಿ ಆಗ್ರಹಿಸಿದ್ದಾರೆ. ಆದರೆ ಈ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ನನಗೆ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವ ಆಸೆ ಇದೆ. ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಚಿಂತನೆ ನಡೆಸಿಲ್ಲ ಎಂದು ಭವಾನಿ ಅವರು ಕನ್ನಡಪ್ರಭ ದೈನಿಕಕ್ಕೆ ತಿಳಿಸಿದ್ದಾರೆ.
ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಹೊಳೆನರಸೀಪುರ ಮತ್ತು ಕೆ.ಆರ್.ನಗರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಡ ಹೇರಿದ್ದು ಉಂಟು. ಆದರೆ ಸ್ಪರ್ಧಿಸಲಿಲ್ಲ. ಸೋಮವಾರ ದೆಹಲಿಯಿಂದ ದೇವೇಗೌಡರು ಬಂದ ನಂತರ ನಾನು ಸ್ಪರ್ಧಿಸುವ ಬಗ್ಗೆ ಪಕ್ಷದ ಮುಖಂಡರು, ಕಾರ್ಯಕರ್ತರೊಡನೆ ಚರ್ಚಿಸುವರು ಎಂದು ಹೇಳಿದರು. |