ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಬಳ್ಳಾರಿಯಲ್ಲಿ ಅಕ್ರಮ ಎಸಗಿರುವ ಆರೋಪದ ಮೇಲೆ ಸಚಿವರಾದ ಜನಾರ್ದನ ರೆಡ್ಡಿ, ಶ್ರೀರಾಮುಲು ಮತ್ತವರ ಬೆಂಬಲಿಗರ ಮೇಲೆ ಹೂಡಿದ್ದ ಮೊಕದ್ದಮೆಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿರುವುದನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿದೆ.
ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣಗಳನ್ನು ಸರ್ಕಾರ ಈ ರೀತಿ ಏಕಾಏಕಿ ಹಿಂದಕ್ಕೆ ಪಡೆಯುವುದು ಸರಿಯಲ್ಲ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಿ.ಎಸ್. ಸುರಂಜನ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಈ ಕ್ರಮವನ್ನು ತಡೆಹಿಡಿಯುವಂತೆ ಚುನಾವಣಾ ಆಯೋಗದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಲ್ಲಿ ವಿಶೇಷ ಅನುದಾನ ನೀಡಿರುವ ಸರ್ಕಾರದ ತೀರ್ಮಾನಕ್ಕೆ ಆಯೋಗ ಏನು ಮಾಡಲಾಗದು, ಆದರೆ ಯಾವುದೇ ಕಾಮಗಾರಿಗಳು ಆರಂಭವಾಗಿಲ್ಲದಿದ್ದರೆ, ಚುನಾವಣೆ ಮುಗಿಯುವ ತನಕ ಆರಂಭಿಸುವಂತಿಲ್ಲ ಎಂಬ ಸೂಚನೆಯನ್ನು ಸರ್ಕಾರಕ್ಕೆ ನೀಡುವುದಾಗಿ ಅವರು ಇದೇ ಸಂದರ್ಭದಲ್ಲಿ ಹೇಳಿದರು. |