ಐದು ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿಗೆ ಜೆಡಿಎಸ್ ಒಲವು ವ್ಯಕ್ತಪಡಿಸಿದ್ದು, ಈ ಬಗ್ಗೆ ಇನ್ನು ಮಾತುಕತೆ ಅಂತಿಮಗೊಂಡಿಲ್ಲ ಎಂದು ಜೆಡಿಎಸ್ ಹೇಳಿದೆ.
ಈಗಾಗಲೇ ನಾಲ್ಕು ಕ್ಷೇತ್ರಗಳ ಕಾರ್ಯಕರ್ತರ ಸಭೆಯನ್ನು ಸಂಸದ ಎಚ್.ಡಿ. ಕುಮಾರಸ್ವಾಮಿ ಕರೆದಿದ್ದು ಸುದೀರ್ಘ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್ ಜತೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ನಿಟ್ಟಿನಲ್ಲಿಯೇ ಪಕ್ಷದ ಮುಖಂಡರು ಆಲೋಚಿಸುತ್ತಿದ್ದಾರೆ. ಆದರೆ ಈ ಕುರಿತು ಪಕ್ಷದ ವರಿಷ್ಠ ಮುಖಂಡರಾದ ಎಚ್.ಡಿ. ದೇವೇಗೌಡರ ನಿಲುವಿಗಾಗಿ ಕಾಯಲಾಗುತ್ತಿದೆ ಎಂದು ತಿಳಿದು ಬಂದಿದೆ.
ಐದು ಕ್ಷೇತ್ರಗಳ ಪೈಕಿ ರಾಮನಗರ ಮಾತ್ರ ಜೆಡಿಎಸ್ ಗೆದ್ದ ಕ್ಷೇತ್ರವಾಗಿದೆ. ಉಳಿದಂತೆ ಚನ್ನಪಟ್ಟಣದಲ್ಲಿ ಜೆಡಿಎಸ್ ಎರಡನೇ ಸ್ಥಾನದಲ್ಲಿತ್ತು. ಈ ಎರಡು ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ಜೆಡಿಎಸ್ ಹವಣಿಸುತ್ತಿದೆ.
ಇದೇ ವೇಳೆ ಉಪಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಕುರಿತು ಯಾವುದೇ ಪ್ರಸ್ತಾಪ ತಮಗೆ ಬಂದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ. ಸೋಮವಾರ ಸಂಜೆ ನಡೆಯಲಿರುವ ಪಕ್ಷದ ಪ್ರಮುಖರ ಸಭೆಯಲ್ಲಿ ಉಪಚುನಾವಣೆ ಸಿದ್ಧತೆ ಬಗ್ಗೆ ಚರ್ಚಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಎರಡೂ ಪಕ್ಷಗಳು ಕೈಜೋಡಿಸಬೇಕೆಂಬ ಬಗ್ಗೆ ಜೆಡಿಎಸ್‌ನಿಂದ ಯಾವುದೇ ಪ್ರಸ್ತಾಪ ಬಂದಿಲ್ಲ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕೋಮುವಾದಿ ಬಿಜೆಪಿಯನ್ನು ಮಣಿಸುವ ಬಗ್ಗೆ ಎರಡೂ ಪಕ್ಷಗಳಲ್ಲಿ ಯಾವುದೇ ಭಿನ್ನತೆಯಿಲ್ಲ. ಆದರೆ ಚುನಾವಣಾ ಮೈತ್ರಿ ಬಗ್ಗೆ ಏನು ಹೇಳಲು ಬರುವುದಿಲ್ಲ. ಹಿರಿಯರ ಅಭಿಪ್ರಾಯ ಪಡೆದು ಮುನ್ನಡೆಯಲಾಗುವುದು ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ವಿವರಿಸಿದರು. |