ರಾಜ್ಯ ಹೈಕೋರ್ಟ್ ತಮ್ಮ ಪರ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಆಗೋಸ್ಟ್ 1ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಕಾಲಿಡುವುದಾಗಿ ಶ್ರೀರಾಮಸೇನೆಯ ವರಿಷ್ಠ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.ಪ್ರಚೋದನಾಕಾರಿ ಭಾಷಣ ಆರೋಪ ಹಾಗೂ ಮಂಗಳೂರು ಪಬ್ ಮೇಲಿನ ದಾಳಿ ಕಾರಣದ ನೆಲೆಯಲ್ಲಿ ಪ್ರಮೋದ್ ಮುತಾಲಿಕ್ ಅವರು ದಕ್ಷಿಣ ಕನ್ನಡ ಜಿಲ್ಲಾ ಪ್ರವೇಶಕ್ಕೆ ಜಿಲ್ಲಾಧಿಕಾರಿಗಳು ನಿಷೇಧ ಹೇರಿದ್ದರು. ಆದರೆ ಜಿಲ್ಲಾಧಿಕಾರಿಗಳ ಆದೇಶವನ್ನು ಮುತಾಲಿಕ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಪ್ರವೇಶ ನಿರ್ಬಂಧಕ್ಕೆ ತಡೆಯಾಜ್ಞೆ ನೀಡಿತ್ತು.ದ.ಕ. ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರಿರುವ ಕ್ರಮಕ್ಕೆ ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಮುತಾಲಿಕ್ ಬಾರ್ಕೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ತಿಳಿಸಿದ್ದಾರೆ.ಅಲ್ಲದೇ ಇತ್ತೀಚೆಗೆ ಮೈಸೂರಿನ ಕ್ಯಾತಮಾರನಹಳ್ಳಿಯಲ್ಲಿ ನಡೆದ ಕೋಮುಗಲಭೆ ಹಿಂದೆ ಶ್ರೀರಾಮ ಸೇನೆ ಭಾಗಿಯಾಗಿದೆ ಎಂಬ ಆರೋಪವನ್ನು ತಳ್ಳಿಹಾಕಿದರು. ತಮಿಳುನಾಡು, ಗೋವಾ, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶಗಳಲ್ಲಿ ಸೇನಾ ಘಟಕವನ್ನು ತೆರೆಯಲಾಗುವುದು ಎಂದು ಈ ಸಂದರ್ಭದಲ್ಲಿ ಹೇಳಿದರು.ಪಿಂಕ್ ಚಡ್ಡಿ ಹರಾಜು: ಪ್ರೇಮಿಗಳ ದಿನಾಚರಣೆಯನ್ನು ತೀವ್ರವಾಗಿ ವಿರೋಧಿಸಿದ ಕ್ರಮವನ್ನು ಖಂಡಿಸಿ, ಮುತಾಲಿಕ್ ಅವರಿಗೆ ಕಳುಹಿಸಿದ್ದ 3ಸಾವಿರ ಪಿಂಕ್ ಚಡ್ಡಿಯನ್ನು ಹರಾಜು ಹಾಕಿದ್ದು, ಅದರಿಂದ ಬಂದ 3ಸಾವಿರ ರೂಪಾಯಿಯನ್ನು ಬೆಳಗಾಂನ ವಿವೇಕಾನಂದ ಬಾಲಾಶ್ರಮಕ್ಕೆ ದೇಣಿಗೆ ನೀಡಲಾಗಿದೆ ಎಂದು ಮುತಾಲಿಕ್ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು. |