ಪುತ್ತೂರಿನ ಕೊಕ್ಕಡ ಸಮೀಪ ಭಾನುವಾರ ಭೀಕರ ರಸ್ತೆ ಅಪಘಾತ ಸಂಭವಿಸಿ ಮಾರುತಿ ಓಮ್ನಿಯಲ್ಲಿದ್ದ ಒಂದೇ ಕುಟುಂಬದ ಇಬ್ಬರ ಸಹಿತ ನಾಲ್ವರು ಸಾವಿಗೀಡಾಗಿದ್ದು, ಐವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಧರ್ಮಸ್ಥಳಕ್ಕೆ ಭೇಟಿ ನೀಡಿ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೊರಟಿದ್ದ ಸಂದರ್ಭದಲ್ಲಿ ಮಾರುತಿ ಓಮ್ನಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳು ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿರುವುದಾಗಿ ಉಪ್ಪಿನಂಗಡಿ ಎಸ್.ಐ.ನಾಗೇಶ್ ತಿಳಿಸಿದ್ದಾರೆ.
ತುಮಕೂರು ಕ್ಯಾತಸಂದ್ರ ಇಂದಿರಾನಗರ ಬಡಾವಣೆ ನಿವಾಸಿ ಓಬಳಾ ನರಸಿಂಹಯ್ಯ (58), ಪ್ರಹ್ಲಾದ (27), ರಾಮಕ್ಕ(43) ಮತ್ತು ಕಾರಿನ ಚಾಲಕ ಕೃಷ್ಣಪ್ಪ(47) ಮೃತಪಟ್ಟಿದ್ದಾರೆ. ರಾಮಕ್ಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಉಳಿದ ಮೂವರು ಆಸ್ಪತ್ರೆಗೆ ಕರೆದೊಯ್ಯುವಾಗ ಅಸು ನೀಗಿದರು. ನೀಲಮ್ಮ(35), ಅವರ ಪುತ್ರಿಯರಾದ ಕಾವ್ಯಶ್ರೀ (18), ದಿವ್ಯಶ್ರೀ (15) ಹಾಗೂ ನೀಲಮ್ಮ ಅವರ ಅಕ್ಕ ಮಂಜುಳಾ(42), ಆಕೆಯ ಪುತ್ರ ಗಣೇಶ್(6) ಗಾಯಗೊಂಡಿದ್ದಾರೆ.
ರಸ್ತೆ ಬದಿ ನಿಲ್ಲಿಸಿದ್ದ ಮಾರುತಿ ಓಮ್ನಿ ಕಾರಿಗೆ ಹಿಂದೆ ಮತ್ತು ಮುಂದಿನಿಂದ ಎರಡು ಬಸ್‌ಗಳು ಒಂದೇ ಸಮಯದಲ್ಲಿ ನೇರವಾಗಿ ಅಪ್ಪಳಿಸಿದಾಗ ಈ ದುರ್ಘಟನೆ ಸಂಭವಿಸಿತ್ತು. ಆದರೆ ಮೂತ್ರ ವಿಸರ್ಜನೆಗೆಂದು ಕಾರಿನಿಂದ ಇಳಿದಿದ್ದ ಕುಟುಂಬದ ಯಜಮಾನ ಸೇತುರಾಂ ಅಪಾಯದಿಂದ ಪಾರಾಗಿದ್ದಾರೆ. |