ರಾಜ್ಯದ ಐದು ವಿಧಾನಸಭಾ ಉಪ ಚುನಾವಣೆ ಹಾಗೂ ಮುಂಬರುವ ಬಿಬಿಎಂಪಿ ಚುನಾವಣೆಗಳ ಬಿಸಿ ತಾರಕಕ್ಕೇರುತ್ತಿರುವ ಸಂದರ್ಭದಲ್ಲಿಯೇ ಆಡಳಿತಾರೂಢ ಬಿಜೆಪಿ ನೂತನ ರಾಜ್ಯಾಧ್ಯಕ್ಷರ ಆಯ್ಕೆ ಕುರಿತು ಬಿರುಸಿನ ಚಟುವಟಿಕೆಯಲ್ಲಿ ತೊಡಗಿದೆ.ಹಾಲಿ ಅಧ್ಯಕ್ಷ ಡಿ.ವಿ. ಸದಾನಂದಗೌಡರ ಅಧಿಕಾರಾವಧಿ ನವೆಂಬರ್‌ಗೆ ಮುಕ್ತಾಯಗೊಳ್ಳಲಿದೆ, ಅಷ್ಟರೊಳಗೆ ಮುಂದಿನ ರಾಜ್ಯಾಧ್ಯಕ್ಷರನ್ನು ಚುನಾಯಿಸಬೇಕಾದ ಅನಿವಾರ್ಯತೆಯಲ್ಲಿ ಬಿಜೆಪಿ ಸಿಲುಕಿದೆ.ಮುಂಬರುವ ಆಗಸ್ಟ್ 1 ಮತ್ತು 2ರಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯುತ್ತಿದ್ದು, ಆ ಸಭೆಯಲ್ಲಿ ಮುಂದಿನ ಅಧ್ಯಕ್ಷರ ಆಯ್ಕೆ ನಡೆಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.ಒಕ್ಕಲಿಗ ಸಮುದಾಯಕ್ಕೆ ಸೇರಿದ ಸದಾನಂದಗೌಡರ ನಿರ್ಗಮನ ನಂತರ ಆ ಸ್ಥಾನವನ್ನು ಒಕ್ಕಲಿಗರಿಗೇ ನೀಡಬೇಕೋ ಅಥವಾ ಬೇರೆ ವರ್ಗಗಳಿಗೆ ನೀಡಬೇಕೋ ಎಂಬುದು ಇನ್ನು ಅಂತಿಮಗೊಂಡಿಲ್ಲ. ಈ ಬಗ್ಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ರಾಜ್ಯ ಬಿಜೆಪಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸದಾನಂದಗೌಡರನ್ನೇ ಮುಂದುವರೆಸಬೇಕೇ ಎಂಬ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆಗಳಿವೆ.ಈ ನಡುವೆ ಸದಾನಂದಗೌಡರ ಉತ್ತರಾಧಿಕಾರಿ ಸ್ಥಾನದಲ್ಲಿ ಸದ್ಯಕ್ಕೆ ಕೇಳಿ ಬರುತ್ತಿರುವ ಹೆಸರುಗಳಲ್ಲಿ ಮಾಜಿ ಸಂಸದ ಸಿ.ಎಚ್. ವಿಜಯ್ ಶಂಕರ್, ಸಚಿವ ಅರವಿಂದ ಲಿಂಬಾವಳಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಮುಖವಾಗಿ ಕೇಳಿ ಬರುತ್ತಿವೆ. ಇದೇ ವೇಳೆ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ. |