ಬೆಂಗಳೂರಿನಲ್ಲಿ ತಮಿಳು ಕವಿ ತಿರುವಳ್ಳುವರ್ ಪ್ರತಿಮೆ ಅನಾವರಣಗೊಳಿಸುವುದಕ್ಕೆ ಸಂಬಂಧಿಸಿದಂತೆ ವಿರೋಧಗಳು ಹೆಚ್ಚಾಗುತ್ತಿರುವಂತೆಯೇ, ಕಾರ್ಯಕ್ರಮ ಮುಂದೂಡುವ ಸಾಧ್ಯತೆಗಳನ್ನೂ ತಳ್ಳಿಹಾಕಲಾಗದು. ಇದಕ್ಕೆ ಕಾರಣವೆಂದರೆ, ರಾಜ್ಯದ ಐದು ವಿಧಾನಸಭಾ ಕ್ಷೇತ್ರಗಳಿಗೆ ಈಗಾಗಲೇ ಮರುಚುನಾವಣೆ ಘೋಷಿಸಲಾಗಿದ್ದು, ನೀತಿ ಸಂಹಿತೆ ಜಾರಿಯಲ್ಲಿರುವುದು.
ಈ ಪ್ರತಿಮೆ ಅನಾವರಣಗೊಳಿಸುವುದಕ್ಕೆ ಚುನಾವಣಾ ಆಯೋಗವು ಅನುಮತಿ ನೀಡುವ ಸಾಧ್ಯತೆಗಳು ಕಡಿಮೆ. ಆದರೂ ಅನುಮತಿಗೆ ಪ್ರಯತ್ನಿಸಲಾಗುವುದು, ಅಷ್ಟಾಗಿಯೂ ಆಯೋಗ ಅನುಮತಿ ನೀಡದಿದ್ದರೆ, ಪ್ರತಿಮೆ ಅನಾವರಣ ಕಾರ್ಯಕ್ರಮ ಒಂದು ತಿಂಗಳು ವಿಳಂಬವಾಗಬಹುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಪ್ರತಿಮೆ ಸ್ಥಾಪನೆಗೆ ಸಂಬಂಧಿಸಿದಂತೆ ಕನ್ನಡ ಪರ ಸಂಘಟನೆಗಳು ಸರಕಾರಕ್ಕೆ ಬೆದರಿಕೆ ಹಾಕುವುದು ಮತ್ತು ಷರತ್ತು ವಿಧಿಸುವುದು ತರವಲ್ಲ, ಈ ಬಗ್ಗೆ ಯಾವುದಾದರೂ ಸಲಹೆಗಳಿದ್ದರೆ ಅದನ್ನು ಪರಿಗಣಿಸಲು ಸಿದ್ಧ ಎಂದ ಯಡಿಯೂರಪ್ಪ, ಕನ್ನಡ ಪರ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಪ್ರತಿಮೆ ಅನಾವರಣಗೊಳಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಶೀಘ್ರದಲ್ಲೇ ಕನ್ನಡ ಪರ ಹೋರಾಟಗಾರರೊಂದಿಗೆ ಈ ಕುರಿತು ಮಾತುಕತೆ ನಡೆಸಲಾಗುತ್ತದೆ. ಅವುಗಳ ಬೇಡಿಕೆಗಳಿದ್ದರೆ ಸರಕಾರಕ್ಕೆ ಸಲ್ಲಿಸಲಿ, ಅವುಗಳನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಬದಲಾಗಿ ಅನಗತ್ಯ ಮತ್ತು ಅವಾಸ್ತವಿಕ ಹೇಳಿಕೆ ನೀಡುವುದು ಸರಿಯಲ್ಲ ಎಂದೂ ಯಡಿಯೂರಪ್ಪ ಹೇಳಿದರು. |