ಬಿಬಿಎಂಪಿ ಚುನಾವಣೆ ಮೇಲೆ ಕಣ್ಣಿಟ್ಟಿರುವ ಮುಖ್ಯಮಂತ್ರಿಗಳು ತಮಿಳು ಕವಿ ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೆ ಮುಂದಾಗಿರುವುದಾಗಿ ಆರೋಪಿಸಿರುವ ಕರ್ನಾಟಕ ರಕ್ಷಣಾ ವೇದಿಕೆ, ಬೆಂಗಳೂರಿನಲ್ಲಿ ತಿರುವಳ್ಳುವರ್ ಮತ್ತು ಚೆನ್ನೈನಲ್ಲಿ ಸರ್ವಜ್ಞ ಕವಿ ಪ್ರತಿಮೆಗಳು ಏಕಕಾಲಕ್ಕೆ ಅನಾವರಣ ಮಾಡಬೇಕು ಎಂಬುದು ಸೇರಿದಂತೆ ನಾಲ್ಕು ಷರತ್ತುಗಳನ್ನು ಉಭಯ ಸರ್ಕಾರಗಳಿಗೆ ವಿಧಿಸಿದೆ.
ನಾಲ್ಕು ಷರತ್ತುಗಳನ್ನು ಈಡೇರಿಸಿದರೆ ಮಾತ್ರ ಉದ್ಯಾನನಗರಿಯಲ್ಲಿ ತಿರುವಳ್ಳುವರ್ ಪ್ರತಿಮೆ ಇರುತ್ತದೆ. ಷರತ್ತು ಈಡೇರಿಸಲು ಮುಖ್ಯಮಂತ್ರಿಗಳಿಗೆ ಗಡುವು ವಿಧಿಸಿರುವ ಕರವೇ, ಷರತ್ತು ಈಡೇರದಿದ್ದರೆ ಬೆಂಗಳೂರು ಬಂದ್ ನಡೆಸುವುದಾಗಿ ಎಚ್ಚರಿಕೆ ನೀಡಿವೆ.
ಅಲ್ಲದೇ ಬೇಡಿಕೆ ಈಡೇರಿಸದೆ ಪ್ರತಿಮೆ ಅನಾವರಣಕ್ಕೆ ಮುಂದಾದಲ್ಲಿ ಮಂದೆ ಆಗುವ ಅನಾಹುತಕ್ಕೆ ರಾಜ್ಯ ಸರ್ಕಾರವೇ ಹೊಣೆ ಎಂದು ಶನಿವಾರ ನಗರದಲ್ಲಿ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ನೇತೃತ್ವದಲ್ಲಿ ನಡೆದ ಸಭೆ ಗಂಭೀರವಾಗಿ ಎಚ್ಚರಿಸಿದೆ.
ನಾಲ್ಕು ಷರತ್ತು ಈಡೇರಿಕೆ ಕುರಿತಂತೆ ರಾಜ್ಯ ಸರ್ಕಾರ ಜು.28ರೊಳಗೆ ಕನ್ನಡಪರ ಸಂಘಟನೆಗಳ ಜೊತೆ ಸಭೆ ನಡೆಸಬೇಕು. ಆದರೆ ಕನ್ನಡ ಸಂಘಟನೆಗಳ ಎಚ್ಚರಿಕೆ ಕಡೆಗಣಿಸಿ ಆಗೋಸ್ಟ್ 9ರಂದು ಪ್ರತಿಮೆ ಅನಾವರಣಕ್ಕೆ ಮುಂದಾದರೆ ಬೆಂಗಳೂರು ಬಂದ್ ಮಾಡಲಾಗುವುದು ಎಂದು ಸಭೆಯಲ್ಲಿ ತೀರ್ಮಾನ ಕೈಗೊಂಡಿದೆ.
ನಾಲ್ಕು ಷರತ್ತುಗಳು: ಕನ್ನಡ ಮತ್ತು ತೆಲುಗಿಗೆ ಶಾಸ್ತ್ರೀಯ ಸ್ಥಾನ ನೀಡಿರುವುದನ್ನು ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್‌ನಲ್ಲಿರುವ ಮೊಕದ್ದಮೆಯನ್ನು ತಮಿಳುನಾಡು ಸರ್ಕಾರ ಹೈಕೋರ್ಟ್‌ನಲ್ಲಿ ವಕಾಲತ್ತು ವಹಿಸಿ ಮೊಕದ್ದಮೆ ವಾಪಸ್ ಪಡೆಯಬೇಕು.
ಬೆಂಗಳೂರಿನ ಮಹಾನಗರ ಹಲಸೂರು ಕೆರೆ ದಂಡೆಯ ಮೇಲೆ ತಿರುವಳ್ಳುವರ್ ಪ್ರತಿಮೆ ಸ್ಥಾಪನೆಗೆ ಸ್ಥಳ ನೀಡಿರುವಂತೆಯೇ, ಚೆನ್ನೈನ ಟಿ.ನಗರದ ಮೌಂಟ್ ರಸ್ತೆ ಅಥವಾ ಗ್ರಾಂಟ್ ರಸ್ತೆಯಲ್ಲಿ ಸರ್ವಜ್ಞ ಪ್ರತಿಮೆಗೆ ಸ್ಥಳ ನೀಡಬೇಕು.
ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಹಾಗೂ ಚೆನ್ನೈನಲ್ಲಿ ಸರ್ವಜ್ಞ ಪ್ರತಿಮೆಯನ್ನು ಒಂದೇ ದಿನ ಉಭಯ ಸರ್ಕಾರಗಳೂ ಉದ್ಘಾಟಿಸಬೇಕು.
ಹೊಗೇನಕಲ್ ಅರಣ್ಯ ಪ್ರದೇಶದಲ್ಲಿ ಜಂಟಿ ಸರ್ವೆ ಕಾರ್ಯ ಮುಗಿಯುವವರೆಗೆ ತಮಿಳುನಾಡು ಸರ್ಕಾರ ಯಾವುದೇ ಗಡಿ ಒತ್ತುವರಿ ಕೆಲಸ ಮಾಡುವುದಿಲ್ಲ ಎಂದು ಘೋಷಿಸಬೇಕು. |