ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಚುನಾವಣೆ ನಡೆಸಲು ಎಂಟು ವಾರಗಳ ಕಾಲಾವಕಾಶ ನೀಡುವಂತೆ ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್‌ಗೆ ಮನವಿ ಮಾಡಿದೆ.
ನ್ಯಾಯಾಲಯ ನೀಡಿರುವ ಸೂಚನೆಯಂತೆ ಜೂನ್ ತಿಂಗಳ ಅಂತ್ಯದ ಒಳಗೆ ಚುನಾವಣೆ ನಡೆಸಲು ಸಾಧ್ಯವಾಗದಿರುವುದರಿಂದ ಎಂಟು ವಾರಗಳ ಕಾಲಾವಕಾಶ ನೀಡುವಂತೆ ಹೈಕೋರ್ಟ್‌ನಲ್ಲಿ ಕೋರಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಸಿ.ಆರ್.ಚಿಕ್ಕಮಠ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು ಮಹಾನಗರಪಾಲಿಕೆ ಬೃಹತ್ ಬೆಂಗಳೂರು ಮಹಾನಗರವಾಗಿ ರೂಪುಗೊಂಡ ನಂತರ 147 ವಾರ್ಡ್‌ಗಳು ಇದ್ದಿದ್ದು 198ಕ್ಕೆ ಏರಿಕೆಯಾಗಿದೆ. ಈ ಸಂಬಂಧ ಹೊಸ ವಾರ್ಡ್‌ಗಳ ರಚನೆ, ವಾರ್ಡ್‌ಗಳ ವ್ಯಾಪ್ತಿ ಗುರ್ತಿಸುವಿಕೆ ಕಾರ್ಯ ವಿಳಂಬವಾಯಿತು. ಇತ್ತೀಚೆಗೆ ವಾರ್ಡ್‌ಗಳ ಪುನರ್ ವಿಂಗಡಣೆ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಹೇಳಿದರು.
ವಾರ್ಡ್‌ಗಳಿಗೆ ಮೀಸಲಾತಿ ನಿಗದಿಪಡಿಸಿರುವ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ಈ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ. ಪರಿಸ್ಥಿತಿ ಹೀಗಿರುವಾಗ ಈ ತಿಂಗಳ ಒಳಗೆ ಚುನಾವಣೆ ನಡೆಸಲು ಸಾಧ್ಯವಾಗದು ಎಂಬುದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿದರು. |