ಗುಲ್ಬರ್ಗಾ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿಗಳ ಚುನಾವಣೆ ಮುಂದೂಡುವ ಮೂಲಕ ಸರ್ಕಾರ ಪಂಚಾಯತಿ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡಿದೆ ಎಂದು ವಿಧಾನಸಭೆಯಲ್ಲಿ ಸೋಮವಾರ ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸರ್ಕಾರದ ಹಸ್ತಕ್ಷೇಪ ಖಂಡಿಸಿ ಸಭಾತ್ಯಾಗ ನಡೆಸಿದವು.
ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಈ ತಿಂಗಳ 16ರಂದು ನಿಗದಿಯಾಗಿದ್ದ ಗುಲ್ಬರ್ಗಾ ಜಿಲ್ಲಾ ಪಂಚಾಯಿತಿಯ ಸ್ಥಾಯಿ ಸಮಿತಿಗಳ ಚುನಾವಣೆಯನ್ನು ಮುಂದಕ್ಕೆ ಹಾಕುವ ಮೂಲಕ ಸರ್ಕಾರ ಪಂಚಾಯಿತಿ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡಿದೆ. ಯಾವುದೇ ಕಾರಣವಿಲ್ಲದೇ ದುರುದ್ದೇಶದಿಂದ ಈ ಚುನಾವಣೆಯನ್ನು ಮುಂದೂಡಲಾಗಿದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಜಿಲ್ಲಾ ಪಂಚಾಯತಿಯಲ್ಲಿ ಕಾಂಗ್ರೆಸ್‌ಗೆ ಬಹುಮತ ಇರುವುದರಿಂದ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾಗುತ್ತದೆ ಎನ್ನುವ ಒಂದೇ ಕಾರಣದಿಂದ ಕಾನೂನು ಮತ್ತು ಸಂವಿಧಾನ ಬಾಹಿರವಾಗಿ ಚುನಾವಣೆ ಮುಂದೂಡುವಂತೆ ಪಂಚಾಯತ್ ರಾಜ್ ಸಚಿವರು ಸೂಚನೆ ನೀಡಿದ್ದಾರೆ. ಇದು ಖಂಡನೀಯ ಎಂದ ಅವರು, ಪಂಚಾಯತ್ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಸರ್ಕಾರಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದರು.
ಆದರೆ ಸರ್ಕಾರ ನೀಡಿದ ಉತ್ತರದಿಂದ ಆಕ್ರೋಶಗೊಂಡ ಕಾಂಗ್ರೆಸ್ ಸದಸ್ಯರು ನಿಯಮಾವಳಿಗಳಲ್ಲಿ ಚುನಾವಣೆಗಳನ್ನು ಮುಂದೂಡಲು ಅವಕಾಶವಿಲ್ಲದಿದ್ದರೂ ಚುನಾವಣೆಗಳನ್ನು ಮುಂದೂಡಲಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ, ಸರ್ಕಾರದ ಈ ನಿರ್ಧಾರವನ್ನು ಖಂಡಿಸಿ ಸಭಾತ್ಯಾಗ ಮಾಡುತ್ತಿರುವುದಾಗಿ ಹೇಳಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸದನದಿಂದ ಹೊರ ನಡೆದರು.
ಕಾಂಗ್ರೆಸ್ ನಿರ್ಧಾರಕ್ಕೆ ಬೆಂಬಲ ವ್ಯಕ್ತಪಡಿಸಿದ ಜೆಡಿಎಸ್ ನಾಯಕ ರೇವಣ್ಣ ಸರ್ಕಾರದ ಕ್ರಮ ಸರಿಯಲ್ಲ ಎಂದು ಟೀಕಿಸಿ ತಮ್ಮ ಸದಸ್ಯರ ನೇತೃತ್ವದಲ್ಲಿ ಅವರೂ ಸಹ ಸಭಾತ್ಯಾಗದಲ್ಲಿ ಭಾಗಿಯಾದರು. |