ಸಂಗೀತ ಲೋಕದ ಮಹಾರಾಣಿ, ಪದ್ಮಭೂಷಣ ಪ್ರಶಸ್ತಿ ವಿಜೇತೆ ವಿದುಷಿ ಗಂಗೂಬಾಯಿ ಹಾನಗಲ್ (97)ಅವರು ಮಂಗಳವಾರ ಬೆಳಿಗ್ಗೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಅಸ್ತಂಗತರಾದರು.ಹೃದಯ ಸಂಬಂಧಿ ಹಾಗೂ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಗಂಗೂಬಾಯಿ ಅವರನ್ನು ಕಳೆದ ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಿಗ್ಗೆ 7.10ಕ್ಕೆ ಹುಬ್ಬಳ್ಳಿಯ ಲೈಫ್‌ಲೈನ್ ಆಸ್ಪತ್ರೆಯಲ್ಲಿ ವಿಧಿವಶರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.ಸುಮಾರು ಆರು ದಶಕಗಳ ಕಾಲ ತಮ್ಮ ಸ್ವರ ಮಾಧುರ್ಯದಿಂದ ಹಾಗೂ ನಿಖರತೆಗಳಿಂದ ಹಿಂದೂಸ್ತಾನಿ ಸಂಗೀತ ಪ್ರಿಯರಿಗೆ ಮೋಡಿ ಮಾಡಿದ್ದ ಗಂಗೂಬಾಯಿ ಅವರು, ರಕ್ತ ಹೀನತೆ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.ನಿನ್ನೆ ರಾತ್ರಿ ಅವರ ಅಸ್ವಸ್ಥತೆ ಉಲ್ಭಣಿಸಿದಾಗ ಅವರಿಗೆ ಜೀವರಕ್ಷಕ ವ್ಯವಸ್ಥೆಯನ್ನು ಅಳವಡಿಸಲಾಯಿತಾದರೂ ಪ್ರಯೋಜನವಾಗದೆ ಇಂದು ಬೆಳಿಗ್ಗೆ ನಿಧನರಾದರು ಎಂದು ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಡಾ.ಅಶೋ ಕಲಮದಾನಿ ತಿಳಿಸಿದ್ದಾರೆ.ಕಳೆದ ಜೂನ್ 3ರಂದೇ ಹಾನಗಲ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಅವರು ಗುಣಮುಖರಾಗಿ ಹಿಂದಿರುಗಿದ್ದರು. ಆದರೆ ಜು.12ರಂದು ಮತ್ತೆ ಆಸ್ಪತ್ರೆಗೆ ಸೇರಿಸಲಾಗಿದ್ದು, 2ದಿನಗಳ ನಂತರ ಅವರನ್ನು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಲೈಫ್‌ಲೈನ್‌ಗೆ ದಾಖಲಿಸಲಾಗಿತ್ತು. ' ಬಾಯಿಜೀ' ಎಂದೇ ಪ್ರೀತಿಯಿಂದ ಕರೆಯಿಸಿಕೊಳ್ಳುತ್ತಿದ್ದ ಹಾನಗಲ್ ಅವರು ಆರೋಗ್ಯದ ಬಗ್ಗೆ ಕಿಂಚಿತ್ತೂ ಯೋಚಿಸದೆ ಮಹಾರಾಷ್ಟ್ರದ ಮತ್ತು ಸಾಂಗ್ಲಿ ಮುಂತಾದ ಕಡೆಗಳಿಂದಲೂ ಬಂದಿದ್ದ ತಮ್ಮ ಶಿಷ್ಯ ಕೋಟಿಗೆ ಅವರು ಕೊನೆಯವರೆಗೂ ಸಂಗೀತವನ್ನು ಕಲಿಸುತ್ತಲೇ ಇದ್ದರು. ಅದಕ್ಕಿಂತಲೂ ತಾವೇ ಸಂಗೀತ ಕಲಿಸಿದ್ದ ತಮ್ಮ ಕರುಳಿನ ಕುಡಿ ಕೃಷ್ಣಾ ಹಾನಗಲ್ ತಮಗಿಂತ ಮೊದಲೇ ನಿಧನರಾಗಿದ್ದು ಗಂಗೂಬಾಯಿ ಅವರನ್ನು ಕಂಗೆಡಿಸಿತ್ತು.1913 ಮಾರ್ಚ್ 5ರಂದು ಹಾನಗಲ್‌ನಲ್ಲಿ ಜನಿಸಿದ್ದ ಗಂಗೂಬಾಯಿ ತಮ್ಮ 10ನೇ ವಯಸ್ಸಿನಲ್ಲಿಯೇ ತಾಯಿಯಿಂದ ಸಂಗೀತಾಭ್ಯಾಸದಲ್ಲಿ ತೊಡಗಿದ್ದರು. ಸವಾಯಿ ಗಂಧರ್ವರ ಶಿಷ್ಯೆಯಾಗಿರುವ ಕಿರಾನಾ ಘರಾನಾ ಪರಂಪರೆಯ ಗಾಯಕಿ ಗಂಗೂಬಾಯಿ ದೇಶ-ವಿದೇಶಗಳಲ್ಲಿ ಹಾಡಿನ ಮೂಲಕ ಜನಾನುರಾಗಿದ್ದರು.1971 ರಲ್ಲಿ ಪದ್ಮಭೂಷಣ, 2002ರಲ್ಲಿ ಪದ್ಮವಿಭೂಷಣ ಸೇರಿದಂತೆ 50ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗಳಿಸಿರುವ ಹಾನಗಲ್ ಅವರು ಜರ್ಮನ್, ಕೆನಡಾ, ಅಮೆರಿಕ, ನೇಪಾಳ ಸೇರಿದಂತೆ 9 ದೇಶಗಳಲ್ಲಿ ಸಂಗೀತ ಕಚೇರಿ ನಡೆಸಿದ ಕೀರ್ತಿಗೆ ಭಾಜನರಾಗಿದ್ದಾರೆ.ಸರ್ಕಾರಿ ಗೌರವಗಳೊಂದಿಗೆ ನಾಳೆ ಅಂತ್ಯಕ್ರಿಯೆ: ಗಂಗೂಬಾಯಿ ಹಾನಗಲ್ ಅವರ ಪಾರ್ಥಿವ ಶರೀರವನ್ನು ಹುಬ್ಬಳ್ಳಿಯ ಇಂದಿರಾಗಾಂಧಿ ಗಾಜಿನ ಮನೆಯಲ್ಲಿ ಮಂಗಳವಾರ ಮಧ್ಯಾಹ್ನದಿಂದ ಸಂಜೆ 5 ಗಂಟೆ ತನಕ ಸಾರ್ವಜನಿಕರ ವೀಕ್ಷಣೆಗೆ ಇಡಲಾಗಿದೆ. ಅಲ್ಲದೇ ಬುಧವಾರ 9ಗಂಟೆಗೆ ಕೇಶವಪುರದಲ್ಲಿರುವ ಮುಕ್ತಿಧಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.ಎರಡು ದಿನ ಶೋಕಾಚರಣೆ: ಖ್ಯಾತ ಗಾನ ಕೋಗಿಲೆ ಗಂಗೂಬಾಯಿ ಹಾನಗಲ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿ, ರಾಜ್ಯದಲ್ಲಿ ಎರಡು ದಿನಗಳ ಕಾಲ ಶೋಕಾಚರಣೆಗೆ ಆದೇಶ ನೀಡಿದ್ದಾರೆ. ನಾಳೆ ಧಾರವಾಡ-ಹುಬ್ಬಳ್ಳಿ ಶಾಲಾ-ಕಾಲೇಜುಗಳಿಗೆ ರಜೆ ಸಾರಲಾಗಿದೆ ಎಂದು ವಿಧಾನಸಭೆಯಲ್ಲಿ ಮಾತನಾಡುತ್ತ ತಿಳಿಸಿದರು.ಗಂಗಜ್ಜಿಯ ನೆನಪಿಗಾಗಿ ಹುಬ್ಬಳ್ಳಿಯಲ್ಲಿ ಪ್ರತಿಮೆ ಸ್ಥಾಪಿಸಲು ನಿರ್ಧರಿಸಿರುವುದಾಗಿ ಹೇಳಿದ ಅವರು, ಹುಬ್ಬಳ್ಳಿಯಲ್ಲಿ ಸಂಗೀತ ವಿ.ವಿ.ಸ್ಥಾಪಿಸಿ ಅದಕ್ಕೆ ಗಂಗೂಬಾಯಿ ಅವರ ಹೆಸರನ್ನಿಡಲಾಗುವುದು ಎಂದರು.ಭಾರತ ರತ್ನ ನೀಡಲು ಆಗ್ರಹ: ಗಂಗೂಬಾಯಿ ಹಾನಗಲ್ ಅವರ ನಿಧನಕ್ಕೆ ಹಿರಿಯ ಸಾಹಿಯಿ ಪಾಟೀಲ್ ಪುಟ್ಟಪ್ಪ ಸೇರಿದಂತೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ. ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಮಾತನಾಡಿ, ಹಿರಿಯ ಸಂಗೀತ ಸಾಮ್ರಾಜ್ಞಿ ಅವರ ನಿಧನದಿಂದಾಗಿ ಸಂಗೀತ ಕ್ಷೇತ್ರಕ್ಕೆ ನಷ್ಟವಾಗಿದೆ ಎಂದರು. ಅಲ್ಲದೇ ಗಂಗೂಬಾಯಿ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಪ್ರತಿಪಕ್ಷಗಳು ಆಗ್ರಹಿಸಿವೆ. |