ಐದು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಸಂಬಂಧಿಸಿದಂತೆ ಮೂರು ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಬಿಜೆಪಿ ರಾಜ್ಯ ಘಟಕ ಅಂತಿಮಗೊಳಿಸಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.
ಗೋವಿಂದರಾಜ ನಗರದಲ್ಲಿ ಸಚಿವ ವಿ.ಸೋಮಣ್ಣ. ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೀಶ್ವರ್ ಹಾಗೂ ಕೊಳ್ಳೇಗಾಲದಲ್ಲಿ ಎ.ಆರ್.ಕೃಷ್ಣಮೂರ್ತಿ ಅಖಾಡಕ್ಕೆ ಇಳಿಯಲಿದ್ದಾರೆ. ಇನ್ನುಳಿದ ಎರಡು ಕ್ಷೇತ್ರಗಳಾದ ರಾಮನಗರ ಮತ್ತು ಚಿತ್ತಾಪುರದಲ್ಲಿ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಎರಡು ಅಥವಾ ಮೂರು ದಿನಗಳಲ್ಲಿ ಅಂತಿಮಗೊಳಿಸಲಿದೆ. ಈ ಕ್ಷೇತ್ರಗಳಲ್ಲಿ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸಾಧ್ಯತೆಯನ್ನು ಬಿಜೆಪಿ ಕಾದು ನೋಡುತ್ತಿದೆ.
ಕಾಂಗ್ರೆಸ್ ಪಕ್ಷದ ನಾಯಕರು ಕೂಡ ಸೋಮವಾರ ಸಂಜೆ ಸಭೆ ಸೇರಿ ಚರ್ಚೆ ನಡೆಸಿದ್ದಾರೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ವಿಳಂಬ ಮಾಡದೆ ಆದಷ್ಟು ಬೇಗ ಪ್ರಕಟಿಸಿ ಎಂದು ಹೈಕಮಾಂಡ್ ಮನವಿ ಮಾಡಲು ರಾಜ್ಯ ನಾಯಕರು ಉದ್ದೇಶಿಸಿದ್ದಾರೆ. ಅಲ್ಲದೆ, ಜೆಡಿಎಸ್ ಜತೆ ಹೊಂದಾಣಿಕೆ ಅಗತ್ಯವಿಲ್ಲ ಎಂಬ ಮಾತೂ ಕಾಂಗ್ರೆಸ್ ಪಕ್ಷದಲ್ಲಿ ಕೇಳಿ ಬಂದಿದೆ.
ಕಾಂಗ್ರೆಸ್ ಈವರೆಗೂ ಯಾವುದೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಲ್ಲ, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಗೋವಿಂದರಾಜ ನಗರ ಪ್ರಿಯಕೃಷ್ಣ ಅಥವಾ ಎಚ್.ಎಂ.ರೇವಣ್ಣ, ಚನ್ನಪಟ್ಟಣ-ಡಿ.ಕೆ.ಸುರೇಶ್ ಅಥವಾ ಸಾದತ್ ಅಲಿ, ಕೊಳ್ಳೇಗಾಲ-ಜಯಣ್ಣ ಅಥವಾ ಎಂ.ಶಿವಣ್ಣ, ಚಿತ್ತಾಪುರ-ಪ್ರಿಯಾಂಕ ಖರ್ಗೆ, ರಾಮನಗರ-ಸಿ.ಎಂ.ಲಿಂಗಪ್ಪ ಅಥವಾ ಸಿಂಧ್ಯಾ ಹೆಸರು ಕೇಳಿ ಬರುತ್ತಿದೆ. |