ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡಿಗೆ ರಾಜ್ಯದಿಂದ ನೀರು ಬಿಡಲು ಅಭ್ಯಂತರವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರುವ ಮೂರ್ನಾಲ್ಕು ದಿನಗಳಲ್ಲಿ ಕೃಷ್ಣರಾಜ ಸಾಗರ ಮತ್ತು ಕಬಿನಿ ಜಲಾಶಯಗಳು ತುಂಬುವ ನಿರೀಕ್ಷೆ ಇದೆ. ರಾಜ್ಯದ ಜಲಾಶಯಗಳು ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡಿಗೆ ನೀರು ಬಿಡಲು ಯಾವುದೇ ಅಭ್ಯಂತರ ಇಲ್ಲ ಎಂದು ಈ ಸಂದರ್ಭದಲ್ಲಿ ಹೇಳಿದರು.
ಆಂಧ್ರಪ್ರದೇಶ ಸಿ.ಎಂ.ಗೆ ಪತ್ರ ರವಾನೆ: ಆಂಧ್ರಪ್ರದೇಶದ ತೆಲುಗುದೇಶಂ ಪಕ್ಷದ ಶಾಸಕರು ಯಾವುದೇ ಮಾಹಿತಿ ನೀಡದೆ ರಾಜ್ಯದ ಕೃಷ್ಣಾ ಅಚ್ಚುಕಟ್ಟು ಪ್ರದೇಶಕ್ಕೆ ಭೇಟಿ ನೀಡಿರುವ ಬಗ್ಗೆ ರಾಜ್ಯದ ಅಸಮಾಧಾನದ ಬಗ್ಗೆ ಆಂಧ್ರದ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ಅವರಿಗೆ ಮನವಿ ತಲುಪಿಸುವಂತೆ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಸೂಚಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಮುಖ್ಯಮಂತ್ರಿಗಳು ಉತ್ತರಿಸಿದರು. |