ಇಲ್ಲ ಸಲ್ಲದ ಆರೋಪ ಮಾಡಿ ಹೆದರಿಸಿ ಲೋಕಾಯುಕ್ತ ಸಂಸ್ಥೆಯನ್ನು ನಿಷ್ಕ್ರಿಯಗೊಳಿಸಬಹುದು ಎಂದು ಭಾವಿಸಬೇಡಿ, ಅಂತಹ ಬೆದರಿಕೆಗಳಿಗೆ ಬಗ್ಗುವ ಪ್ರಶ್ನೆಯೇ ಇಲ್ಲ ಎಂದು ರಾಜ್ಯದ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ರಾಜ್ಯ ಸರ್ಕಾರಕ್ಕೆ ಹೇಳಿದ್ದಾರೆ.ಲೋಕಾಯುಕ್ತದ ವಿರುದ್ಧ ಸಲ್ಲದ ಆರೋಪ ಮಾಡುವುದು ಎಂದರೆ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವ ಈ ಸಂಸ್ಥೆಯ ಕತ್ತು ಹಿಸುಕುವುದು ಎಂದೇ ಅರ್ಥ ಎಂದು ಅವರು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡುತ್ತ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.ಲೋಕಾಯುಕ್ತಕ್ಕೆ ಅಧಿಕಾರ ಕೊಟ್ಟರೆ ದುರುಪಯೋಗ ಆಗುತ್ತದೆ ಎಂಬ ಆತಂಕ ರಾಜ್ಯ ಸರ್ಕಾರಕ್ಕೆ ಇದ್ದಂತಿದೆ. ಒಮ್ಮೆ ಕೊಟ್ಟು ನೋಡಿ. ದುರುಪಯೋಗ ಆದರೆ ವಾಪಸು ಪಡೆಯಬಹುದು ಎಂಬುದಾಗಿಯೂ ಈ ಸಂದರ್ಭದಲ್ಲಿ ಸಲಹೆ ನೀಡಿದರು. ಹಿಂದೊಮ್ಮೆ ತಾವು ರಾಜೀನಾಮೆ ನೀಡಲು ಹೋದಾಗ ಅಂದಿನ ರಾಜ್ಯಪಾಲ ಟಿ.ಎನ್.ಚತುರ್ವೇದಿ ತಮ್ಮನ್ನು ತಡೆದ ಸಂಗತಿಯನ್ನು ನೆನಪಿಸಿಕೊಂಡ ಹೆಗ್ಡೆಯವರು, ಹೆಚ್ಚಿನ ಅಧಿಕಾರಕ್ಕಾಗಿ ಇನ್ನೆಂದೂ ಸರ್ಕಾರದ ಮುಂದೆ ಭಿಕ್ಷೆ ಬೇಡುವುದಿಲ್ಲ ಎಂದರು. |