ಊಟ ಅಥವಾ ತಿಂಡಿ ತಿನ್ನಬೇಕಾದರೆ ಅದರಲ್ಲಿ ನೊಣ, ತಲೆಕೂದಲು, ಜಿರಳೆ ಸಿಗುವುದು ಸಾಮಾನ್ಯ ಆದರೆ ಊಟದಲ್ಲಿ ಹಾವು ಸಿಕ್ಕಿದರೆ? ಹೌದು ಬಿಸಿಯೂಯಟದಲ್ಲಿ ಹಾವಿನ ಮರಿ ಸಿಕ್ಕಿದ ಘಟನೆ ಬೀದರ್‌ನ ಶಾಲೆಯೊಂದರಲ್ಲಿ ನಡೆದ ವಿಷಯ ಬೆಳಕಿಗೆ ಬಂದಿದೆ.
ಬೀದರ್ ತಾಲೂಕಿನ ಚಿಟ್ಟಾ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ನೀಡುವ ಬಿಸಿಯೂಟದಲ್ಲಿ ಸತ್ತ ಹಾವಿನ ಮರಿ ಪತ್ತೆಯಾಗಿದೆ. ಇದರಿಂದ ರೊಚ್ಚಿಗೆದ್ದ ಪೋಷಕರು ಶಾಲೆಗೆ ನುಗ್ಗಿ ಪ್ರತಿಭಟನೆ ನಡೆಸಿದ್ದಾರೆ.
ಮಕ್ಕಳಿಗಾಗಿ ನೀಡಲು ಸಿದ್ಧಪಡಿಸಿದ್ದ ಸಾಂಬಾರ್‌ನಲ್ಲಿ ಬಡಿಸುವ ಮೊದಲೆ ಸತ್ತ ಹಾವಿನ ಮರಿ ಕಾಣಿಸಿದೆ. ಆದರೆ ತಕ್ಷಣ ಎಚ್ಚೆತ್ತ ಅಡುಗೆ ಸಿಬ್ಬಂದಿ ಈ ವಿಷಯವನ್ನು ಗೌಪ್ಯವಾಗಿ ಎಸ್‌ಡಿಎಂಸಿ ಗಮನಕ್ಕೆ ತಂದು ಸಾಂಬಾರನ್ನು ಚೆಲ್ಲಿ ಮತ್ತೆ ಮಕ್ಕಳಿಗೆ ಸಾಂಬಾರ್ ಮಾಡಿ ಬಡಿಸಿದ್ದಾರೆ.
ಆದರೆ ವಿಷಯ ತಿಳಿದ ವಿದ್ಯಾರ್ಥಿಗಳು ಮತ್ತು ಪಾಲಕರು ಸೇರಿ ಶಾಲೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೆ ಅಡುಗೆ ಸಹಾಯಕರ ನಿಷ್ಕಾಳಜಿಯೇ ಕಾರಣ ಎಂದು ದೂರಿದ್ದಾರೆ. ಸ್ಥಳಕ್ಕೆ ಆಗಮಿಸಿರುವ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂಎಸ್ ವಿಭೂತಿ, ಎಸ್‌ಡಿಎಂಸಿ ಅವರನ್ನು ತರಾಟೆಗೆ ತೆಗೆದುಕೊಂಡಿರುವುದಾಗಿ ಮೂಲಗಳು ತಿಳಿಸಿವೆ. |