ಕೊಕೇನ್ ಮಾರಾಟ ಮಾಡುತ್ತಿದ್ದ ಕೀನ್ಯಾ ದೇಶದ ಪ್ರಜೆಯೊಬ್ಬನನ್ನು ನಗರದಲ್ಲಿ ಬಂಧಿಸಿರುವ ಸಿಸಿಬಿ ಮಹಿಳಾ ಮತ್ತು ಮಾದಕ ವಸ್ತುಗಳ ಪತ್ತೆ ದಳದ ಪೊಲೀಸರು, ಮೂರುವರೆ ಲಕ್ಷ ರೂಪಾಯಿ ಮೌಲ್ಯದ ಕೊಕೇನ್ ಹಾಗೂ 26ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.
ಕೀನ್ಯಾದ ಕಿಸುಮು ನಗರದ ಮಿಕಾಲು(29) ಬಂಧಿತ ಆರೋಪಿ. ಈತ ರೆಸಿಡೆನ್ಸಿ ರಸ್ತೆ ದಿ ಪಬ್ ವರ್ಲ್ಡ್ ಬಸ್ ನಿಲ್ದಾಣದ ಬಳಿ ಗಿರಾಕಿಗಳಿಗೆ ಕೊಕೇನ್ ಮಾರಾಟ ಮಾಡುತ್ತಿದ್ದಾಗ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಮಿಕಾಲು 1998ರಲ್ಲಿ ಡಾ.ಅಂಬೇಡ್ಕರ್ ಕಾನೂನು ಕಾಲೇಜಿಗೆ ಸೇರಿದ್ದ. ಅನುತ್ತೀರ್ಣನಾದ ಬಳಿಕ ಮಾದಕ ವಸ್ತು ಮಾರಾಟ ಮಾಡುವ ದಂಧೆಗೆ ಇಳಿದಿದ್ದ. 2004ರಿಂದ ಭಾರತದಲ್ಲಿ ಅನಧಿಕೃತವಾಗಿ ವಾಸಿಸುತ್ತಿದ್ದ, ಅಲ್ಲದೆ, ಪುಣೆಯಲ್ಲಿರುವ ಕೀನ್ಯಾ ಪ್ರಜೆಯಿಂದ ಮಾದಕ ವಸ್ತು ಕೊಕೇನ್ ತಂದು ನಗರದಲ್ಲಿ ಮಾಡುತ್ತಿದ್ದ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಅಶೋಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. |