ಚನ್ನಪಟ್ಟಣದ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ನಿವಾಸಗಳ ಮೇಲೆ ಮಂಗಳವಾರ ಏಕಕಾಲದಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇಂದು ಬೆಳಿಗ್ಗೆ ಚನ್ನಪಟ್ಟಣದಲ್ಲಿನ ಐದನೇ ಕ್ರಾಸ್‌ನಲ್ಲಿರುವ ಬಿಜೆಪಿ ಪಕ್ಷದ ಕಚೇರಿ ಮತ್ತು ಯೋಗೀಶ್ವರ್ ನಿವಾಸ ಹಾಗೂ ಚಕ್ಕೆರೆಯಲ್ಲಿರುವ ನಿವಾಸ ಸೇರಿದಂತೆ ನಾಲ್ಕು ಕಡೆ ಏಕಕಾಲದಲ್ಲಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸುಮಾರು 10ಕ್ಕೂ ಹೆಚ್ಚು ವಾಹನಗಳಲ್ಲಿ ಆಗಮಿಸಿರುವ ಸುಮಾರು 25ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿದ್ದರು. ಅಲ್ಲದೇ ಬೆಂಗಳೂರಿನಲ್ಲಿರುವ ಅಪಾರ್ಟ್‌ಮೆಂಟ್, ಕಚೇರಿ ಮೇಲೂ ದಾಳಿ ನಡೆಸಿದ್ದರು.
ಸಿ.ಪಿ.ಯೋಗೀಶ್ವರ್ ಕ್ಷೇತ್ರದಲ್ಲಿ ಮೂರು ಬಾರಿ ಜಯಗಳಿಸಿದ್ದರು, ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಪಾಳಯ ಸೇರಿದ್ದರು. ಏಪ್ರಿಲ್‌ನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಿ ಪರಾಜಯಗೊಂಡಿದ್ದರು.
ಈಗ ಮುಂದಿನ ತಿಂಗಳು 18ರಂದು ನಡೆಯಲಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದು, ಚುನಾವಣಾ ತಯಾರಿಯಲ್ಲಿ ತೊಡಗಿದ್ದರು.
ಆದರೆ ಆದಾಯ ತೆರಿಗೆ ಅಧಿಕಾರಿಗಳು ಯಾವ ಉದ್ದೇಶದಿಂದ ದಾಳಿ ನಡೆಸಿದ್ದಾರೆ ಎಂಬ ಬಗ್ಗೆ ವಿವರ ತಿಳಿದು ಬಂದಿಲ್ಲ. ದಾಳಿ ನಡೆದ ಸಂದರ್ಭದಲ್ಲಿ ಯೋಗೀಶ್ವರ್ ಚನ್ನಪಟ್ಟಣದ ತಮ್ಮ ಐದನೇ ಕ್ರಾಸ್‌ನಲ್ಲಿನ ನಿವಾಸದಲ್ಲಿದ್ದರು. |