ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ, ಇನ್ಫೋಸಿಸ್‌ನ ಎನ್.ಆರ್.ನಾರಾಯಣ ಮೂರ್ತಿ ಅವರು ತಮ್ಮ ಪುತ್ರಿ 29ರ ಹರೆಯದ ಪುತ್ರಿ ಅಕ್ಷತಾಳಿಗೆ ಸ್ಟ್ಯಾನ್‌ಫೋರ್ಡ್ ಎಂಬಿಎ ಪದವೀಧರ ಸುನಾಕ್ ಜತೆ ಆಗೋಸ್ಟ್ 30ರಂದು ಉದ್ಯಾನಗರಿಯಲ್ಲಿ ಮದುವೆ ನಡೆಸಲಿದ್ದು, ಇದು ಬೆಂಗಳೂರಿನಲ್ಲಿ ವರ್ಷದ ಅದ್ದೂರಿ ಮದುವೆ ಸಮಾರಂಭವಾಗಿದೆ.
ಅಮೆರಿಕದ ಸ್ಟ್ಯಾನ್‌ಫೋರ್ಡ್ ಬಿಜಿನೆಸ್ ಸ್ಕೂಲ್‌ನಲ್ಲಿ ಸಹಪಾಠಿಯಾಗಿರುವ ಭಾರತ ಮೂಲದ ರಿಶಿ ಸುನಾಕ್ ಜೊತೆ ಆಕೆಯ ವಿವಾಹ ನಡೆಯಲಿದೆ ಎಂದು ನಾರಾಯಣ ಮೂರ್ತಿ ಖಚಿತಪಡಿಸಿದ್ದಾರೆ.
ಸುನಾಕ್ ಮೈಕ್ರೋ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಹಾರ್ವಡ್ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನೆಯಲ್ಲಿ ನಿರತರಾಗಿದ್ದಾರೆ. ಬೆಂಗಳೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದ ಅಕ್ಷತಾ ಮೂರ್ತಿ ಸ್ಟ್ಯಾನ್ ಫೋರ್ಡ್‌ನಲ್ಲಿ ಎಂಬಿಎ ಪದವಿ ಗಳಿಸಿದ್ದಾರೆ.
ಸ್ಟ್ಯಾನ್‌ಫೋರ್ಡ್‌ನಲ್ಲಿ ಶಿಕ್ಷಣಾಭ್ಯಾಸ ಮಾಡುತ್ತಿರುವ ಸಂದರ್ಭದಲ್ಲಿಯೇ ರಿಶಿ ಜತೆ ಗೆಳೆತನ ಹೊಂದಿದ್ದ ಅಕ್ಷತಾ ಇದೀಗ ಆತನ ಜೊತೆಯಲ್ಲಿ ಹಸೆಮಣೆ ಏರಲು ಸಜ್ಜಾಗಿದ್ದಾರೆ.
ಅಕ್ಷತಾ ಪ್ರಸಕ್ತವಾಗಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಮಾರ್ಕೆಟಿಂಗ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಾಥಮಿಕ ಶಿಕ್ಷಣ ಮುಗಿಸಿ ಚಿಕ್ಕವಯಸ್ಸಿನಲ್ಲಿಯೇ ಬೆಂಗಳೂರು ತೊರೆದು, ವಿದೇಶದಲ್ಲೇ ಶಿಕ್ಷಣ ಪಡೆದ ಅಕ್ಷತಾ ಅವರು, ರಂಗ ದೇ ಬಸಂತಿ ಸಿನಿಮಾದಿಂದ ತುಂಬಾ ಪ್ರಭಾವಿತರಾಗಿದ್ದಾರಂತೆ. ಅಲ್ಲದೇ ಜನರು ರಾಜಕೀಯಕ್ಕೆ ಸಕ್ರಿಯವಾಗಿ ದುಮುಕುವ ಮೂಲಕ ಬದಲಾವಣೆ ತರಬೇಕು ಎಂಬ ಕಳಕಳಿ ಅವರದ್ದು.
ಆಗೋಸ್ಟ್ 30ರಂದು ಮದುವೆ ನಿಶ್ಚಯವಾಗಿರುವುದಾಗಿ ತಿಳಿಸಿರುವ ಮೂರ್ತಿ, ಆಹ್ವಾನ ಪತ್ರಿಕೆ ಸಿದ್ದವಾಗಿದ್ದು, ಪುತ್ರಿಯ ಅನುಮತಿ ನಂತರ ಆಹ್ವಾನ ಪತ್ರಿಕೆ ಹಂಚುವುದಾಗಿ ಹೇಳಿದ್ದಾರೆ. ಈ ಅದ್ದೂರಿ ವಿವಾಹದಲ್ಲಿ ಅಕ್ಷತಾ ಮೂರ್ತಿ ಹಾಗೂ ಸುನಾಕ್ ಅವರ ಗೆಳೆಯರು, ಕ್ಲಾಸ್‌ಮೇಟ್‌ಗಳು ಸ್ಟ್ಯಾನ್‌ಫೋರ್ಡ್‌ನಿಂದ ಉದ್ಯಾನಗರಿಗೆ ಬರಲಿದ್ದಾರೆ. ಅದರಂತೆಯೇ ನಾರಾಯಣ ಮೂರ್ತಿ ಅವರ ಆತ್ಮೀಯರು, ಹಿತೈಷಿಗಳು, ಉದ್ಯಮಿಗಳು ಭಾರತ ಮತ್ತು ವಿದೇಶದಿಂದ ಆಗಮಿಸಲಿದ್ದಾರೆ.
ಅಚ್ಚರಿ ಎಂದರೆ ನಾರಾಯಣ ಮೂರ್ತಿ ಅವರು ಸುಧಾ ಅವರನ್ನು 1978ರಲ್ಲಿ ತಮ್ಮ ಕುಟುಂಬ ವರ್ಗದವರ ಸಮ್ಮುಖದಲ್ಲಿ ವಿವಾಹವಾಗಿದ್ದರು. ಅವರ ಮದುವೆಗಾದ ಖರ್ಚು 800ರೂಪಾಯಿ ಮಾತ್ರ! ಹಾಗಂತ ನಾರಾಯಣಮೂರ್ತಿಯವರು ತಮ್ಮ ಮಗಳ ಮದುವೆಯನ್ನು ಅದ್ದೂರಿಯಾಗಿ ನೆರವೇರಿಸುತ್ತಾರೋ? ಇಲ್ಲವೇ ಸಿಂಪಲ್ ಆಗಿಯೇ?ಎಂಬುದು ಕುತೂಹಲದ ಪ್ರಶ್ನೆಯಾಗಿದೆ. |