ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ವಿಳಂಬಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ಮಂಗಳವಾರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಾಮೂರ್ತಿ ಪಿ.ಡಿ. ದಿನಕರನ್ ಮತ್ತು ಎ.ಎಸ್. ಬೋಪಣ್ಣ ಅವರಿದ್ದ ವಿಭಾಗೀಯ ಪೀಠ, ಉದ್ದೇಶಪೂರ್ವಕವಾಗಿಯೇ ಚುನಾವಣೆಯನ್ನು ಮುಂದೂಡುವ ಸರ್ಕಾರದ ವರ್ತನೆ ಬಗ್ಗೆ ಬೇಸರವಿದೆ. ಈ ಸಂಬಂಧ ನ್ಯಾಯಾಲಯಕ್ಕೆ ವಿಸ್ತ್ರತ ವಿವರವನ್ನು ನೀಡುವಂತೆ ಸೂಚನೆ ನೀಡಿದೆ.
ವಾರ್ಡ್ ವಿಂಗಡಣೆಗೆ 30 ದಿನಗಳ ಕಾಲಾವಕಾಶ ನೀಡಬೇಕು. ಆದರೆ ಸರ್ಕಾರ ಕೇವಲ 10 ದಿನಗಳ ಅವಕಾಶ ನೀಡಿದೆ. ಈವರೆಗೂ ವಾರ್ಡ್ ಮೀಸಲು ನಿಗದಿ ಮಾಡಿಲ್ಲ. ಹೀಗೆ ಪ್ರಕ್ರಿಯೆಯನ್ನು ಜಾರಿಗೊಳಿಸುವಲ್ಲಿ ನಿರ್ಲಕ್ಷ್ಯ ವಹಿಸಿ ಚುನಾವಣೆಯನ್ನು ಮುಂದೂಡುವ ಷಡ್ಯಂತ್ರ ನಡೆದಿದೆ ಎಂದು ಪೀಠ ಆತಂಕ ವ್ಯಕ್ತಪಡಿಸಿತು.
ನ್ಯಾಯಾಲಯದ ತಾಳ್ಮೆಯನ್ನು ಪರೀಕ್ಷಿಸುವ ಪ್ರಯತ್ನಬೇಡ. ಈ ಬೆಳವಣಿಗೆಯನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದ ಪೀಠ, ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿಯವರ ಮೇಲೂ ಅಸಮಾಧಾನ ವ್ಯಕ್ತಪಡಿಸಿದೆ. |