ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಬಗರ್ ಹುಕುಂ ಸಮಿತಿ ಮೂಲಕ ನೂರಾರು ಎಕರೆ ಸರ್ಕಾರಿ ಭೂಮಿಯನ್ನು ಜೆಡಿಎಸ್ ಮುಖಂಡರು ಕಬಳಿಸಿದ್ದಾರೆ. ಇದರಲ್ಲಿ ತಹಸೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
2007ರಲ್ಲಿ ಆಗಿನ ಜೆಡಿಎಸ್ ಶಾಸಕ ಜಿ.ಚಂದ್ರಣ್ಣ ಅವರ ಸಂಪೂರ್ಣ ಸಹಕಾರದಿಂದ ಅವರ ಆಪ್ತರು ಹಾಗೂ ಸಂಬಂಧಿಗಳ ಹೆಸರಿನಲ್ಲಿ ಸುಮಾರು 743 ಎಕರೆ ಸರ್ಕಾರಿ ಜಮೀನು ಅಕ್ರಮವಾಗಿ ಅನರ್ಹರ ಪಾಲಾಗಿದೆ ಎನ್ನಲಾಗಿದೆ.
ಇದರಲ್ಲಿ ಜೆಡಿಎಸ್ ಹಾಲಿ ಕಾರ್ಯಾಧ್ಯಕ್ಷ ಸಿ.ನಾರಾಯಣಸ್ವಾಮಿ ಅವರ ಪತ್ನಿ ಪಾರ್ವತಮ್ಮ ಅವರ ಹೆಸರಿನಲ್ಲಿರುವ ಚನ್ನಹಳ್ಳಿ ಗ್ರಾಮದ ಸರ್ವೇ ನಂಬ್ರ ನಂ.64ರ 2ಎಕರೆ ಜಮೀನು ಸೇರಿದೆ ಎಂದು ರಾಜ್ಯ ಬಿಜೆಪಿ ವಕ್ತಾರ ಸಿ.ಟಿ.ರವಿ ಹಾಗೂ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಮಂಗಳವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಒಟ್ಟು ಮಂಜೂರಾಗಿರುವ 743 ಎಕರೆ ಪೈಕಿ ಕೇವಲ 100ಎಕರೆ ಮಾತ್ರ ಅರ್ಹ ಫಲಾನುಭವಿಗಳಿಗೆ ಸೇರಿದೆ. ಸರ್ಕಾರ ಕೂಡಲೇ ಈ ಮಂಜೂರಾಗಿರುವ ಭೂಮಿಯನ್ನು ವಶಕ್ಕೆ ತೆಗೆದುಕೊಳ್ಳಬೇಕು ಎಂದು ಬಿಜೆಪಿ ಆಗ್ರಹಿಸಿದೆ. |