ಬೆಂಗಳೂರು ವ್ಯಾಪ್ತಿಯಲ್ಲಿ ಸಂಭವಿಸುವ ಜನನ ಹಾಗೂ ಮರಣಗಳ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಲು ಬಿಬಿಎಂಪಿ ಆನ್‌ಲೈನ್ ಮೂಲಕ ಪ್ರಮಾಣ ಪತ್ರ ವಿತರಿಸುವ ವ್ಯವಸ್ಥೆಯನ್ನು ಇನ್ನೊಂದು ತಿಂಗಳಲ್ಲಿ ಜಾರಿಗೆ ತರಲಿರುವುದಾಗಿ ತಿಳಿಸಿದೆ.
ಬೆಂಗಳೂರಿನಲ್ಲಿ ವರ್ಷವೊಂದಕ್ಕೆ ಸರಾಸರಿ ಸುಮಾರು1.10ಲಕ್ಷ ಮಕ್ಕಳ ಜನನವಾಗುತ್ತಿದೆ. ಹಾಗೆಯೇ ವಾರ್ಷಿಕವಾಗಿ ಸುಮಾರು 38ಸಾವಿರ ಮಂದಿ ಸಾವನ್ನಪ್ಪುತ್ತಾರೆ ಎಂಬ ಅಂದಾಜು ಇದೆ. ಆದರೆ ಎಲ್ಲವೂ ನೋಂದಣಿಯಾಗುವುದಿಲ್ಲ, ಅಲ್ಲದೇ ನಕಲಿ ಪ್ರಮಾಣ ಪತ್ರಗಳ ಹಾವಳಿ ಕೂಡ ಗೊಂದಲ ಸೃಷ್ಟಿಸಿ ಅವ್ಯವಹಾರಕ್ಕೆ ಎಡೆಮಾಡಿಕೊಟ್ಟಿದೆ.
ಆ ನಿಟ್ಟಿನಲ್ಲಿ ಪ್ರಮಾಣ ಪತ್ರ ಪಡೆಯುವಲ್ಲಿನ ಕಿರಿಕಿರಿ, ನಕಲಿ ಪ್ರಮಾಣ ಪತ್ರ ಹಾವಳಿ ತಡೆಗೆ ಪಾಲಿಕೆ ಆನ್‌ಲೈನ್ ಮೂಲಕ ವಿತರಣಾ ವ್ಯವಸ್ಥೆ ಜಾರಿಗೆ ತರಲಿದೆ. ಈ ವ್ಯವಸ್ಥೆಯಲ್ಲಿ ಮಗುವಿನ ಪೋಷಕರು ಸೂಕ್ತ ದಾಖಲೆಗಳನ್ನು ನೀಡಿದರೆ ಸಾಕು. ಕೆಲವೇ ನಿಮಿಷಗಳಲ್ಲಿ ಪ್ರಮಾಣ ಪತ್ರ ಪಡೆಯಬಹುದು.
ಎಲ್ಲ ಆಸ್ಪತ್ರೆಗಳು ಹಾಗೂ ಇತರೆ ಮಾಹಿತಿಯನ್ನು ಮೊದಲೇ ಅಪ್‌ಲೋಡ್ ಮಾಡಲಾಗಿರುತ್ತದೆ. ಪಾಲಿಕೆಯ ಅಂಕಿ-ಅಂಶ ವಿಭಾಗದ ಜಂಟಿ ನಿರ್ದೇಶಕರ ಡಿಜಿಟಲ್ ಸಹಿ ಕೂಡ ದಾಖಲಾಗಿರುತ್ತದೆ. ಜೊತೆಗೆ ನೋಂದಣಿ ಸಂಖ್ಯೆಯನ್ನೂ ನಮೂದಿಸಲಾಗಿರುತ್ತದೆ.
ನಾಗರಿಕ ಸೇವಾಕೇಂದ್ರಗಳು, 270 ಸಹಾಯ ಕೇಂದ್ರಗಳುಹಾಗೂ ಬೆಂಗಳೂರು-ಒನ್ ಕೇಂದ್ರಗಳಲ್ಲಿ ಆನ್‌ಲೈನ್‌ನಲ್ಲಿ ಪ್ರಮಾಣ ಪತ್ರ ಪಡೆಯಬಹುದಾಗಿದೆ. ಆದರೆ ಪ್ರಮಾಣ ಪತ್ರದಲ್ಲಿ ಯಾವುದಾದರು ತಿದ್ದುಪಡಿ ಆಗಬೇಕಾದರೆ ಎಂ.ಜಿ.ರಸ್ತೆಯಲ್ಲಿರುವ ಬಹುಮಹಡಿ ಕಟ್ಟದಲ್ಲಿನ ಕಚೇರಿಗೆ ಹೋಗಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಲಿಕೆಯ 37ಆರೋಗ್ಯ ವೈದ್ಯಾಧಿಕಾರಿಗಳ ಕಚೇರಿ, ಆರು ರೆಫರಲ್ ಆಸ್ಪತ್ರೆಗಳು ಹಾಗೂ ಐದು ಸರ್ಕಾರ ಆಸ್ಪತ್ರೆಗಳಲ್ಲಿ ಜನನ ಪ್ರಮಾಣ ಪತ್ರ ವಿತರಿಸುವ ವ್ಯವಸ್ಥೆ ಇದೆ. ಅರ್ಜಿ ಸಲ್ಲಿಸಿದ ಏಳು ದಿನಗಳಲ್ಲಿ ಪ್ರಮಾಣ ಪತ್ರ ವಿತರಿಸಬೇಕು ಇಲ್ಲವೇ ಯಾವ ಕಾರಣಕ್ಕೆ ಪ್ರಮಾಣ ಪತ್ರ ನೀಡಲು ಸಾಧ್ಯವಾಗಿಲ್ಲ ಎಂಬ ವಿವರ ನೀಡಲಾಗುತ್ತದೆ. ಮಗು ಜನಿಸಿದ 21ದಿನದ ಒಳಗೆ ಪ್ರಮಾಣ ಪತ್ರ ಪಡೆಯಬಹುದು. ನಂತರ ದಂಡ ಸಹಿತವಾಗಿ ಒಂದು ವರ್ಷದೊಳಗೆ ಪ್ರಮಾಣ ಪತ್ರ ಪಡೆಯಬೇಕು. |