ಗಾನ ಗಂಗೆ ಗಂಗೂಬಾಯಿ ಹಾನಗಲ್ ಅವರ ಪಾರ್ಥಿವ ಶರೀರಕ್ಕೆ ಸಕಲ ಸರ್ಕಾರಿ ಗೌರವಗಳೊಂದಿಗೆ ಬುಧವಾರ ಇಲ್ಲಿನ ಶಿರಡಿನಗರದ ಗಂಗೂಬಾಯಿ ಗುರುಕುಲ ಟ್ರಸ್ಟ್‌ನಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನಡೆಸುವ ಮೂಲಕ ಪಂಚಭೂತಗಳಲ್ಲಿ ಲೀನವಾದರು.ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಗುರುಕುಲ ಟ್ರಸ್ಟ್ ಸ್ಥಳಕ್ಕೆ ಗಂಗೂಬಾಯಿ ಅವರ ಪಾರ್ಥಿವ ಶರೀರವನ್ನು ತರಲಾಯಿತು. ಹುಬ್ಬಳ್ಳಿಯ ಪೊಲೀಸರಿಂದ ಗೌರವ ವಂದನೆ ಸಲ್ಲಿಕೆ. ಮೆರವಣಿಗೆಯುದ್ದಕ್ಕೂ ಕುಟುಂಬ ವರ್ಗ, ಹಿತೈಷಿಗಳು ಸೇರಿದಂತೆ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ಪಾಲ್ಗೊಂಡಿದ್ದರು.ಗಂಗೂಬಾಯಿ ನಿಧನದ ಅಂಗವಾಗಿ ಹುಬ್ಬಳ್ಳಿ-ಧಾರವಾಡ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಹಾನಗಲ್ ಪಾರ್ಥಿವ ಶರೀರ ಮೆರವಣಿಗೆಯಲ್ಲಿ ವಿಧಾನಸಭಾಧ್ಯಕ್ಷ ಜಗದೀಶ್ ಶೆಟ್ಟರ್, ಸಂಸದ ಪ್ರಹ್ಲಾದ್ ಜೋಷಿ, ಪಾಟೀಲ್ ಪುಟ್ಟಪ್ಪ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.ಸಂಗೀತ ಲೋಕದ ಮಹಾರಾಣಿ, ಪದ್ಮಭೂಷಣ ಪ್ರಶಸ್ತಿ ವಿಜೇತೆ ವಿದುಷಿ ಗಂಗೂಬಾಯಿ ಹಾನಗಲ್ (97)ಅವರು ಮಂಗಳವಾರ ಬೆಳಿಗ್ಗೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದರು.ಹೃದಯ ಸಂಬಂಧಿ ಹಾಗೂ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಗಂಗೂಬಾಯಿ ಅವರನ್ನು ಕಳೆದ ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ಬೆಳಿಗ್ಗೆ 7.10ಕ್ಕೆ ಹುಬ್ಬಳ್ಳಿಯ ಲೈಫ್‌ಲೈನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.1913 ಮಾರ್ಚ್ 5ರಂದು ಹಾನಗಲ್‌ನಲ್ಲಿ ಜನಿಸಿದ್ದ ಗಂಗೂಬಾಯಿ ತಮ್ಮ 10ನೇ ವಯಸ್ಸಿನಲ್ಲಿಯೇ ತಾಯಿಯಿಂದ ಸಂಗೀತಾಭ್ಯಾಸದಲ್ಲಿ ತೊಡಗಿದ್ದರು. ಸವಾಯಿ ಗಂಧರ್ವರ ಶಿಷ್ಯೆಯಾಗಿರುವ ಕಿರಾನಾ ಘರಾನಾ ಪರಂಪರೆಯ ಗಾಯಕಿ ಗಂಗೂಬಾಯಿ ದೇಶ-ವಿದೇಶಗಳಲ್ಲಿ ಹಾಡಿನ ಮೂಲಕ ಜನಾನುರಾಗಿದ್ದರು. |