ತೊಗರಿ ಸೇರಿದಂತೆ ಬೇಳೆಕಾಳುಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವುದರ ಹಿಂದಿನ ಗುಟ್ಟು ಇದೀಗ ಬಯಲಾಗಿದೆ. ತೊಗರಿ ಬೆಲೆ ಕೇವಲ 3ತಿಂಗಳ ಹಿಂದಿನ ದರಕ್ಕಿಂತ ಸರಿಸುಮಾರು ಶೇ.100ರಷ್ಟು ಏರಿಕೆ ಕಂಡಿದೆ. ತೊಗರಿ ಕೆ.ಜಿ.ಗೆ 100ರೂ.ಗೆ ಏರಿದೆ!.
ಗುಲ್ಬರ್ಗಾ ಜಿಲ್ಲೆಯೊಂದರಲ್ಲೇ ಜಿಲ್ಲೆಯ ಅಧಿಕಾರಿಗಳು ಸುಮಾರು ಒಂದು ಲಕ್ಷ ಟನ್ ತೊಗರಿಬೇಳೆಯನ್ನು ವಿವಿಧ ಉಗ್ರಾಣಗಳಲ್ಲಿ ದಾಸ್ತಾನು ಮಾಡಿ ಇಟ್ಟುಕೊಂಡಿರುವುದನ್ನು ಪತ್ತೆ ಹಚ್ಚುವ ಮೂಲಕ ರಾಜ್ಯದಲ್ಲಿ ಒಂದೇ ಸಮನೆ ತೊಗರಿಬೇಳೆ ಬೆಲೆ ಏರಿಕೆಯ ಕಾರಣದ ಹಿಂದಿನ ಗುಟ್ಟನ್ನು ಬಯಲು ಮಾಡಿದ್ದಾರೆ.
ಗುಲ್ಬರ್ಗಾ ನಗರದಲ್ಲಿರುವ ಕರ್ನಾಟಕ ಸ್ಟೇಟ್ ವೇರ್‌ಹೌಸಿಂಗ್ ಕಾರ್ಪೋರೇಶನ್ ಸೇರಿದಂತೆ 88 ಉಗ್ರಾಣಗಳಲ್ಲಿ ತೊಗರಿಬೇಳೆಯನ್ನು ಶೇಖರಿಸಿಟ್ಟಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ. ಆ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ಸೋಮವಾರ ನಡೆದಿದ್ದು, ತೊಗರಿಬೇಳೆ ಬೆಲೆ ಏರಿಕೆ ಮತ್ತು ಅಕ್ರಮ ದಾಸ್ತಾನು ಕುರಿತು ತನಿಖೆಗೆ ಆದೇಶಿಸಿದ್ದಾರೆ.
ತೊಗರಿ ಮಾತ್ರವಲ್ಲ ಉದ್ದು, ಹೆಸರು, ಕಡ್ಲೆಬೇಳೆ ಸೇರಿದಂತೆ ಎಲ್ಲಾ ಬೇಳೆಯ ಬೆಲೆ ಏರಿದೆ. ಏರುತ್ತಲೇ ಇದೆ. ಈ ಏರಿಕೆ ಇನ್ನೂ 3ತಿಂಗಳ ಕಾಲ ಮುಂದುವರಿಯಲಿದೆ. ಅಲ್ಲದೇ ಬಿಗ್‌ಬಜಾರ್, ಮೋರ್, ರಿಲಯನ್ಸ್, ಫುಡ್‌ವರ್ಲ್ಡ್‌ನಂತಹ ಬೃಹತ್ ಚಿಲ್ಲರೆ ಮಾರಾಟ ಕಂಪೆನಿಗಳು ಭಾರಿ ಪ್ರಮಾಣದಲ್ಲಿ ಬೇಳೆಯನ್ನು ಖರೀದಿಸಿ ಶೇಖರಿಸಿ ಇಟ್ಟಿರುವುದೇ ಬೆಲೆ ಏರಿಕೆಗೆ ಕಾರಣವಾಗಿದೆ.
ಹೆಚ್ಚಿನ ಲಾಭದ ಆಸೆಗಾಗಿ ತೊಗರಿಬೇಳೆಯನ್ನು ಮುಂಜಾಗ್ರತೆಯಾಗಿ ಖರೀದಿಸಿ ಶೇಖರಿಸಿಟ್ಟುಕೊಂಡ ಪರಿಣಾಮ ರಾಜ್ಯದಲ್ಲಿ ತೊಗರಿಬೇಳೆ ಕೃತಕ ಅಭಾವ ಕಾಣಿಸಿಕೊಳ್ಳುವಂತಾಗಿದೆ. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು,ದಾಸ್ತಾನುದಾರರಿಗೆ ಗಂಭೀರ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಅಧಿಕಾರಿಗಳು ದಿ ಹಿಂದು ಪತ್ರಿಕೆಗೆ ತಿಳಿಸಿದ್ದಾರೆ.
ಇದೀಗ ಚಿಲ್ಲರೆ ಮಾರಾಟದಲ್ಲಿ ಪ್ರತಿ ಕೆ.ಜಿ.ಗೆ ನೂರು ರೂಪಾಯಿಗೆ ಸಿಗುತ್ತಿರುವ ತೊಗರಿಬೇಳೆ ಮುಂದಿನ ಎರಡು ತಿಂಗಳಲ್ಲಿ 150ರೂಪಾಯಿಗೆ ಏರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಕಳೆದ ಮಾರ್ಚ್ ತಿಂಗಳಲ್ಲಿ ಸಗಟು ವ್ಯಾಪಾರಿಗಳಲ್ಲಿ ಕೆ.ಜಿ.ಗೆ 40-45ರೂಪಾಯಿಗೆ ಸಿಗುತ್ತಿದ್ದ ಉದ್ದಿನ ಬೇಳೆಗೆ ಈಗ 70ರೂ.ತೆರಬೇಕಾಗಿದೆ. 37ರೂಪಾಯಿಗೆ ಸಿಗುತ್ತಿದ್ದ ಉದ್ದಿನಬೇಳೆಗೆ 66ರೂಪಾಯಿ ಆಗಿದೆ.
ಪ್ರತಿದಿನ ರಾಜ್ಯಕ್ಕೆ 30ರಿಂದ 35ಲೋಡ್ ತೊಗರಿಬೇಳೆ ಬೇಕು. ಬೆಂಗಳೂರು ನಗರ ಒಂದಕ್ಕೆ 10ಲೋಡ್ ಬೇಳೆ ಅಗತ್ಯವಿದೆ. ಆದರೆ, ಅಷ್ಟೊಂದು ಪ್ರಮಾಣದಲ್ಲಿ ತೊಗರಿಬೇಳೆ ಮಾತ್ರ ಸರಬರಾಜಾಗುತ್ತಿಲ್ಲ. |